ನವದೆಹಲಿ: ಮತದಾರರ ಫೋಟೋ ಗುರುತಿನ ಚೀಟಿಯು ವ್ಯಕ್ತಿಯ ಪೌರತ್ವಕ್ಕೆ ನಿರ್ಣಾಯಕ ಪುರಾವೆಯಾಗುವುದಿಲ್ಲ ಎಂದು ಗುವಾಹಟಿ ಹೈಕೋರ್ಟ್ ಪುನರುಚ್ಚರಿಸಿದೆ. ಅಸ್ಸಾಮ್ ಒಪ್ಪಂದದ ಪ್ರಕಾರ ಯಾರು ವಿದೇಶಿಯರು ಎಂಬ ಪರಾಮರ್ಶೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ರೀತಿ ತೀರ್ಪಿತ್ತಿದೆ ಎಂದು ದ ವೈರ್ ಸುದ್ದಿ ಜಾಲತಾಣ ವರದಿ ಮಾಡಿದೆ.
ಪೌರತ್ವವನ್ನು ಸಾಬೀತುಪಡಿಸಲು ಭೂ ಕಂದಾಯ ರಶೀದಿಗಳು, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ದಾಖಲೆಗಳನ್ನು ಪುರಾವೆಯಾಗಿ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಮೇಲಿನ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ವಿದೇಶಿಯರ ನ್ಯಾಯಮಂಡಳಿಯ ತೀರ್ಪನ್ನು ಪ್ರಶ್ನಿಸಿದ ಮುನೀಂದ್ರ ಬಿಸ್ವಾಸ್ ಅವರ ರಿಟ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಮನೋಜಿತ್ ಭುಯಾನ್ ಮತ್ತು ನ್ಯಾಯಮೂರ್ತಿ ಪಾರ್ಥಿವ್ಜೋತಿ ಸೈಕಿಯಾ ಅವರ ವಿಭಾಗೀಯ ಪೀಠವು ನ್ಯಾಯಾಲಯದ ಈ ಹಿಂದಿನ ತೀರ್ಪನ್ನು ಹೀಗೆ ಎತ್ತಿ ಹಿಡಿದಿದೆ.
ಮುಹಮ್ಮದ್ ಬಾಬುಲ್ ಇಸ್ಲಾಂ ವರ್ಸಸ್ ಸ್ಟೇಟ್ ಆಫ್ ಅಸ್ಸಾಂ (ಸಂಖ್ಯೆ 3547) ಪ್ರಕರಣದಲ್ಲಿ ನ್ಯಾಯಾಲಯವು, “ಚುನಾವಣಾ ಫೋಟೋ ಗುರುತಿನ ಚೀಟಿಯು ಪೌರತ್ವದ ಪುರಾವೆಯಲ್ಲ” ಎಂದು ಈ ಹಿಂದೆ ತೀರ್ಪು ನೀಡಿತ್ತು.
ಬಿಸ್ವಾಸ್ ಅವರನ್ನು ನ್ಯಾಯಮಂಡಳಿಯು ಜುಲೈ 2019 ರಲ್ಲಿ ವಿದೇಶಿಯನೆಂದು ಘೋಷಿಸಿತ್ತು. ಆಗ ಅವರು, ತನ್ನ ಅಜ್ಜ ದುರ್ಗಾ ಚರಣ್ ಬಿಸ್ವಾಸ್ ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಗೆ ಸೇರಿದವರು ಮತ್ತು ಅವರ ತಂದೆ ಇಂದ್ರ ಮೋಹನ್ ಬಿಸ್ವಾಸ್ ಅವರು 1965 ರಲ್ಲಿ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಗೆ ವಲಸೆ ಬಂದವರು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ತಾನು ಅಸ್ಸಾಂನಲ್ಲಿ ಜನಿಸಿದ್ದು, ಟಿನ್ಸುಕಿಯಾ ಜಿಲ್ಲೆಯ ಮಾರ್ಗರಿಟಾ ಪಟ್ಟಣದ ನಿವಾಸಿಯಾಗಿದ್ದೇನೆ ಮತ್ತು 1997 ರ ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿರುವ ಪುರಾವೆಗಳನ್ನೂ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೇ ಅವರು 1970 ರಿಂದ ತನ್ನ ಒಡೆತನದಲ್ಲಿರುವ ಭೂ ದಾಖಲೆಗಳನ್ನು ಸಹ ಲಗತ್ತಿಸಿದ್ದಾರೆ. ಆದರೆ, ಜನವರಿ 1, 1966 ರ ಮೊದಲು ಬಿಸ್ವಾಸ್ ಅವರ ಪೋಷಕರು ಅಸ್ಸಾಂಗೆ ಪ್ರವೇಶಿಸಿದ್ದರು ಮತ್ತು ಮಾರ್ಚ್ 24, 1971 ಕ್ಕಿಂತ ಮೊದಲು ಅವರು ರಾಜ್ಯದಲ್ಲಿ ವಾಸಿಸುತ್ತಿದ್ದರು ಎಂದು ಸಾಬೀತುಪಡಿಸುವುದಕ್ಕಾಗಿ ಅವರು 1997 ಕ್ಕಿಂತ ಮೊದಲಿನ ಮತದಾರರ ಪಟ್ಟಿಯನ್ನು ಪುರಾವೆಯಾಗಿ ನೀಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತೀರ್ಪಿತ್ತಿದೆ.
ಅಸ್ಸಾಂ ಒಪ್ಪಂದದಂತೆ, ಪೌರತ್ವ ಕಾಯ್ದೆಯ ಷರತ್ತು 6 ಎ ಪ್ರಕಾರ, ಅಸ್ಸಾಂಗೆ ಪ್ರತ್ಯೇಕವಾದ ಪೌರತ್ವದ ಮೂಲ ವರ್ಷ ಜನವರಿ 1, 1966 ಆಗಿದೆ. ಜನವರಿ 1, 1966 ಮತ್ತು ಮಾರ್ಚ್ 24, 1971 ರ ನಡುವೆ ರಾಜ್ಯದಲ್ಲಿ ನೆಲೆಸಿದವರು ಹತ್ತು ವರ್ಷಗಳ ಅವಧಿಗೆ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಆ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅದನ್ನು ಕ್ರಮಬದ್ಧಗೊಳಿಸಲಾಗುತ್ತದೆ.












