ಹೊರಗಿನಿಂದ ಬಂದವರು ದಿಲ್ಲಿಯಲ್ಲಿ ಹಿಂಸಾಚಾರ ಎಸಗಿದ್ದಾರೆ – ಕೇಜ್ರಿವಾಲ್

0
1320

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 25: ದೇಶದ ರಾಜಧಾನಿಯಲ್ಲಿ ಹಿಂಸಾಚಾರ ವ್ಯಾಪಿಸದಂತೆ ತಡೆಯಲು ಗಡಿಗಳನ್ನು ಮುಚ್ಚಬೇಕು ಮತ್ತು ಮುಂಜಾಗ್ರತಾ ಬಂಧನ ನಡೆಸಬೇಕಾದೀತು ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ. ಘರ್ಷಣೆ ತಡೆಯಲು ಪೊಲೀಸರಿಗೆ ಏನೂ ಮಾಡಲು ಆಗಿಲ್ಲ. ಅವರು ಉನ್ನತ ಅಧಿಕಾರಿಗಳ ಆದೇಶ ಕಾದು ನಿಂತಿದ್ದರು. ಈ ವಿಷಯ ಗೃಹ ಸಚಿವ ಅಮಿತ್ ಶಾರ ಸಭೆಯಲ್ಲಿ ಎತ್ತುವೆನು. ಘರ್ಷಣೆ ನಡೆಯುವಾಗ ದುಷ್ಕರ್ಮಿಗಳ ಮೇಲೆ ಅಶ್ರುವಾಯು ಪ್ರಯೋಗಿಸಬೇಕಾ ಲಾಠಿ ಚಾರ್ಜು ಮಾಡಬೇಕಾ ಎಂದು ಆದೇಶ ಸಿಗದೆ ತೀರ್ಮಾನಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಡೆದ ಗಲಭೆಯಲ್ಲಿ ಹೊರಗಿನಿಂದ ಬಂದವರು ನುಸುಳಿದ್ದಾರೆ. ಆದ್ದರಿಂದ ಗಡಿಯನ್ನು ಮುಚ್ಚಬೇಕು ಎಂದು ಶಾಸಕರು ತಿಳಿಸಿದ್ದರು. ಹೊರಗಿನಿಂದ ಬಂದವರು ಹಿಂಸಾಚಾರ ಎಸಗಿದ್ದೆಂದು ವರದಿಗಳಿವೆ. ಹಿಂಸಾಚಾರ ವ್ಯಾಪಿಸುವುದನ್ನು ತಡೆಯಲು ಗಡಿಗಳನ್ನು ಮುಚ್ಚಿ ಕೆಲವರನ್ನು ಬಂಧಿಸಬೇಕಾದ ಪರಿಸ್ಥಿತಿ ಈಗ ಇದೆ ಎಂದು ಕೇಜ್ರಿವಾಲ್ ಹೇಳಿದರು. ಹಿಂಸಾಚಾರದ ನಂತರ ದಿಲ್ಲಿಯ ಸುರಕ್ಷೆ ಬಿಗಿಗೊಳಿಸಲಾಗಿದೆ. ಸಮಸ್ಯೆ ಪೀಡಿತ ಪ್ರದೇಶಗಳಿಗೆ ಪೊಲೀಸರ ಜೊತೆ ಶಾಂತಿ ರ್ಯಾಲಿ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳಿಗೆ ಸೂಚನೆ ನೀಡಲಾಗಿದೆ. ದಿಲ್ಲಿಯ ಜನರು ಶಾಂತಿ ಪಾಲಿಸಬೇಕು ಎಂದಿರುವ ಕೇಜ್ರಿವಾಲ್ ಹಿಂಸಾಚಾರ ಘಟನೆಗಳನ್ನು ದುರದೃಷ್ಟಕರ ಎಂದು ವಿಷಾದ ಸೂಚಿಸಿದರು.

ಹಿಂಸಾಚಾರದಲ್ಲಿ ಪೊಲೀಸರು ಮತ್ತು ಜನಸಾಮಾನ್ಯರ ಜೀವ ಹೋಗಿದೆ. ಹಲವು ಮನೆಗಳು, ಅಂಗಡಿ, ವಾಹನಗಳು ನಾಶವಾಗಿದೆ. ವಿಶೇಷ ಸಂದರ್ಭದಲ್ಲಿ ಅಗ್ನಿಶಾಮಕ ದಳ ಪೊಲೀಸರ ಜೊತೆಗೂಡಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ಘರ್ಷಣೆಯಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದರು.