ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 3: ದಿಲ್ಲಿಯಲ್ಲಿ ಪ್ರಚೋದಕ ಭಾಷಣ ಮಾಡಿದ ಬಿಜೆಪಿ ನಾಯಕ ಕಪಿಲ್ ಮಿಶ್ರಗೆ ವೈ ಪ್ಲಸ್ ಕೆಟಗರಿ ಭದ್ರತೆ ಕಲ್ಪಿಸಲಾಗಿದೆ. ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ಸುರಕ್ಷೆಯ ವ್ಯವಸ್ಥೆ ಮಾಡಲಾಗಿದ್ದು ಎಲ್ಲ ಸಮಯವೂ ಆಯುಧಧಾರಿ ಅಧಿಕಾರಿಗಳು ಕಪಿಲ್ ಮಿಶ್ರಗೆ ಸುರಕ್ಷೆ ನೀಡುವರು. ದಿಲ್ಲಿ ಚುನಾವಣೆಯ ಪ್ರಚಾರದ ವೇಳೆ ಉತ್ತರ ದಿಲ್ಲಿಯಲ್ಲಿ ಕೋಮು ಗಲಭೆಯ ಮುಂಚೆ ದ್ವೇಷಪೂರಿತ ಭಾಷಣ ಮಾಡಿದ್ದ ಮಿಶ್ರ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಕೇಸು ದಾಖಲಿಸಬೇಕೆಂದು ಪ್ರತಿಪಕ್ಷ ಆಗ್ರಹಿಸಿತ್ತು. ಸಾಮಾಜಿಕ ಮಾಧ್ಯಮಗಳ ಮೂಲಕ ಕಪಿಲ್ ಮಿಶ್ರರಿಗೆ ಬೆದರಿಕೆ ಬಂದಿದ್ದು ತದನಂತರ ವೈಪ್ಲಸ್ ಕೆಟಗರಿ ಸುರಕ್ಷೆಯೊದಗಿಸಲಾಗಿದೆ.
ದ್ವೇಷ ಭಾಷಣ ಮಾಡಿದ್ದಕ್ಕಾಗಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಕೇಸು ದಾಖಲಿಸಬೇಕೆಂದು ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರದಿಂದ ಹೈಕೋಟು ಪ್ರತಿಕ್ರಿಯೆ ಕೇಳಿದೆ. ಯಾಕೆ ದ್ವೇಷಭಾಷಣ ಮಾಡಿದ ಕಪಿಲ್ ಮಿಶ್ರರಂತಹ ಬಿಜೆಪಿ ನಾಯಕರ ವಿರುದ್ಧ ಕೇಸು ದಾಖಲಿಸಲಾಗಿಲ್ಲ ಎಂದು ಕಾಂಗ್ರೆಸ್ ಕೇಳಿತ್ತು. ದ್ವೇಷಭಾಷಣ ಮಾಡಿದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್, ಪರ್ವೇಶ್ ವರ್ಮ , ಕಪಿಲ್ ಮಿಶ್ರ ವಿರುದ್ಧ ಎಫ್ಐಆರ್ ದಾಖಲಿಸಲು ಸಾಮಾಜಿಕ ಕಾರ್ಯಕರ್ತ ಹರ್ಷಮಂದರ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.












