ದೆಹಲಿ ಹಿಂಸಾಚಾರ: ಮೀಡಿಯಾ ಒನ್ ಮತ್ತು ಏಷ್ಯಾ ನೆಟ್ ನ್ಯೂಸ್ ಚಾನೆಲ್ ಗಳಿಗೆ ಕೇಂದ್ರದಿಂದ ನಿಷೇಧ: ತುರ್ತು ಪರಿಸ್ಥಿತಿಯನ್ನೂ ನಾಚಿಸುವ ನಿರ್ಧಾರ ಎಂದ ಮೀಡಿಯಾ ಒನ್

0
1754

ಸನ್ಮಾರ್ಗ ವಾರ್ತೆ

ಮಲಯಾಳಂ ಚಾನೆಲ್‌ಗಳಾದ ಏಷ್ಯನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಗೆ  ‘ದೆಹಲಿ ಗಲಭೆಗಳ ಪ್ರಸಾರಕ್ಕಾಗಿ’ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 48 ಗಂಟೆಗಳ ಕಾಲ ನಿಷೇಧ ವಿಧಿಸಿದೆ. ಮಾರ್ಚ್ 6 ರ ಶುಕ್ರವಾರ ಸಂಜೆ 7.30 ರಿಂದ ಎರಡೂ ಚಾನೆಲ್‌ಗಳು ಪ್ರಸಾರವನ್ನು ನಿಲ್ಲಿಸಿದ್ದು,  ಕಪ್ಪು ಪರದೆಯನ್ನು ತೋರಿಸುತ್ತಿವೆ. ಮಾರ್ಚ್ 8 ರಂದು ರಾತ್ರಿ 7.30 ಕ್ಕೆ ಈ  ಚಾನೆಲ್‌ಗಳು ಮರಳಿ  ಪ್ರಸಾರವನ್ನು ಪುನರಾರಂಭಿಸಲಿದೆ. ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಗಳು  ಹಿಂಸಾಚಾರವನ್ನು ಪ್ರಚೋದಿಸುವ ರೀತಿಯಲ್ಲಿ ಹಾಗೂ ಆರ್‌ಎಸ್‌ಎಸ್ ಮತ್ತು ದೆಹಲಿ ಪೊಲೀಸರ ಬಗ್ಗೆ  ಪಕ್ಷಪಾತದಿಂದ ವರದಿ ಮಾಡಿದೆ. ಹಾಗೆಯೇ ನಿರ್ದಿಷ್ಟ ಸಮುದಾಯದ ಪರವಾಗಿ ಸುದ್ದಿ ತಯಾರಿಸಿದ್ದು ಸಿಎಎ ಬೆಂಬಲಿಗರನ್ನು ಕೆಟ್ಟದಾಗಿ ತೋರಿಸಿದೆ ಎಂದು  ಸಚಿವಾಲಯದ ಆದೇಶವು ಆರೋಪಿಸಿದೆ.

ಜಾಫ್ರಾಬಾದ್ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಏಷ್ಯಾ ನೆಟ್ ಪತ್ರಕರ್ತ ಪಿ ಆರ್ ಸುನಿಲ್ ಅವರು ಮಾಡಿದ ವರದಿಯಲ್ಲಿ   ದೆಹಲಿ ಪೊಲೀಸರು ಮೌನ ಪ್ರೇಕ್ಷಕರಾಗಿದ್ದರು ಎಂದಿರುವುದು ನಿಷೇಧಕ್ಕೆ ಕಾರಣವಾಗಿದೆ. ಮೀಡಿಯಾ ಒನ್‌ಗೆ ಸಂಬಂಧಿಸಿದಂತೆ, ಇದರ  ದೆಹಲಿ ವರದಿಗಾರ ಹಸನುಲ್ ಬನ್ನಾ ಅವರೊಂದಿಗೆ ಫೋನ್-ಇನ್ ಸಂಭಾಷಣೆಯ ವೇಳೆ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆಯ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಲು ನಿರಾಕರಿಸಿದ್ದಾರೆ ಎಂದಿರುವುದು ನಿಷೇಧಕ್ಕೆ ಕಾರಣವಾಗಿ ನೀಡಲಾಗಿದೆ.

ದೆಹಲಿ ಹಿಂಸಾಚಾರದ ವರದಿಗಳ ಪ್ರಸಾರದ ವೇಳೆ ಪೂಜಾ ಸ್ಥಳಗಳ ಮೇಲಿನ ದಾಳಿಯನ್ನು  ನಿರ್ದಿಷ್ಟ ಸಮುದಾಯದ ಕಡೆಗೆ ಎತ್ತಿ ತೋರಿಸುವ ರೀತಿಯಲ್ಲಿ ತೋರಿಸಲಾಗಿದೆ. ದೆಹಲಿ ಹಿಂಸಾಚಾರದ ಬಗ್ಗೆ ಚಾನೆಲ್ ಪಕ್ಷಪಾತದಿಂದ ವರದಿ ಮಾಡಿದೆ ಮತ್ತು ಆರ್‌ಎಸ್‌ಎಸ್ ಅನ್ನು ಪ್ರಶ್ನಿಸಿದೆ  ಮತ್ತು ದೆಹಲಿ ಪೊಲೀಸ್ ನಿಷ್ಕ್ರಿಯರಾಗಿದ್ದರು ಎಂದು ಆರೋಪಿಸಿದೆ ಹಾಗೂ ದೆಹಲಿ ಪೊಲೀಸ್ ಮತ್ತು ಆರ್‌ಎಸ್‌ಎಸ್ ಬಗ್ಗೆ ಚಾನೆಲ್ ವಿಮರ್ಶಾತ್ಮಕವಾಗಿ ವರದಿ ತಯಾರಿಸಿದೆ ”ಎಂದು ಆದೇಶದಲ್ಲಿ ತಿಳಿಸಲಾಗಿದೆ.”

ಹಿಂಸಾಚಾರವು ಹೆಚ್ಚಾಗಿ ಮುಸ್ಲಿಂ ಪ್ರಾಬಲ್ಯದ ದೆಹಲಿಯ ಚಂದ್ ಬಾಗ್ನಲ್ಲಿ ನಡೆದಿದೆ ಎಂದು ಚಾನೆಲ್ ವರದಿ ಮಾಡಿದೆ. ಸುದ್ದಿ ಪ್ರಸಾರ ಮಾಡುವಾಗ, ಚಾನೆಲ್ ಕಲ್ಲು ತೂರಾಟ, ಅಗ್ನಿಸ್ಪರ್ಶ ಮತ್ತು ಗಾಯಗೊಂಡ ಜನರನ್ನು ಆಸ್ಪತ್ರೆಗೆ ಕರೆದೊಯ್ಯುವ ಸುದ್ದಿಯನ್ನು ತೋರಿಸಿದೆ ”ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದೇವೇಳೆ, ಈ ನಿಷೇಧವನ್ನು ಮೀಡಿಯಾ ಒನ್ ಆಡಳಿತವು ತೀವ್ರವಾಗಿ ಆಕ್ಷೇಪಿಸಿದ್ದು, ಮಾಧ್ಯಮ ಸ್ವಾತಂತ್ರ್ಯವನ್ನು ತಡೆಯುವಲ್ಲಿ ತುರ್ತು ಪರಿಸ್ಥಿತಿಯನ್ನೂ ಈ ಆದೇಶ ಮೀರಿಸುವಂತಿದೆ ಎಂದಿದೆಯಲ್ಲದೆ, ಇದನ್ನು ಕಾನೂನು ಪ್ರಕಾರ ಎದುರಿಸುವುದಾಗಿ ಹೇಳಿದೆ.