ಮೀಡಿಯ ವನ್ ಚಾನೆಲ್ ನಿಷೇಧವನ್ನು ಹಿಂಪಡೆದ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ

0
943

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 7: ಮೀಡಿಯ ವನ್ ಟಿವಿ ಚಾನೆಲ್ ಮೇಲೆ ಕೇಂದ್ರ ವಾರ್ತಾ ಪ್ರಸಾರ ಇಲಾಖೆಯು ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಶನಿವಾರ ಬೆಳಗ್ಗೆ 9:30 ಕ್ಕೆ ಮೀಡಿಯ ವನ್ ಟಿವಿ ಚಾನೆಲ್ ಪ್ರಸಾರವನ್ನು ಪುನರಾರಂಭಿಸಿದೆ. ಹದಿನಾಲ್ಕು ಗಂಟೆಗಳ ಬಳಿಕ ಕೇಂದ್ರ ಸರಕಾರ ನಿಷೇಧ ತೆರವುಗೊಳಿಸಿತು. ಏಷ್ಯನೆಟ್‍ ಮೇಲೆ ಇದ್ದ ನಿಷೇಧವನ್ನು ಶನಿವಾರ ಬೆಳಗ್ಗೆ ಒಂದು ಗಂಟೆಗೆ ತೆರವುಗೊಳಿಸಲಾಗಿತ್ತು.

ದಿಲ್ಲಿಯ ಗಲಭೆಯ ಕುರಿತು ಪಕ್ಷಪಾತದ ವರದಿ ಮಾಡಲಾಗಿದೆ ಎಂದು ಆರೋಪಿಸಿ ಚ್ಯಾನೆಲ್ ಪ್ರಸಾರವನ್ನು 48 ಗಂಟೆಗಳ ಕಾಲ ಕೇಂದ್ರ ಸಚಿವಾಲಯವು ನಿಷೇಧಿಸಿತ್ತು. ಶುಕ್ರವಾರ ಸಂಜೆ 7:30ರಿಂದ ರವಿವಾರ ರಾತ್ರೆ 7:30ರವರೆಗೆ ನಿಷೇಧವಿತ್ತು. ಚ್ಯಾನೆಲ್‍ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವನ್ನು ತಡೆಹಿಡಿಯಲಾಗಿತ್ತು. ದಿಲ್ಲಿ ಕೋಮುಗಲಭೆಗೆ ಸಂಬಂಧಿಸಿದ ವರದಿಗಳಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿ ವಾರ್ತಾ ಪ್ರಸಾರ ಸಚಿವಾಲಯ ಈ ಕ್ರಮ ಜರಗಿಸಿತ್ತು. ಸಚಿವಾಲಯ ಫೆಬ್ರವರಿ 28 ಕ್ಕೆ ಎರಡು ಚ್ಯಾನೆಲ್‍ಗಳಿಂದ ವಿವರಣೆಯನ್ನು ಕೇಳಿತ್ತು. ಆದರೆ ಮೀಡಿಯ ಒನ್ ಮ್ಯಾನೇಜ್‍ಮೆಂಟ್ ನೀಡಿದ ವಿವರಣೆ ತೃಪ್ತಿಕರವಲ್ಲ ಎಂದು ಕ್ರಮ ಜರಗಿಸಿತ್ತು. ದಿಲ್ಲಿ ಪೊಲೀಸ್ ಮತ್ತು ಆರೆಸ್ಸೆಸ್ಸನ್ನು ಟೀಕಿಸಲಾಗಿದೆ ಎಂದು ಆರೋಪಿಸಿ ಫೆಬ್ರವರಿ 25ಕ್ಕೆ ಪ್ರಸಾರವಾದ ವರದಿಯಲ್ಲಿ ಕ್ರಮ ಜರಗಿಸಲಾಗಿದೆ ಎಂದು ತಿಳಿಸಲಾಗಿತ್ತು.

ದಿಲ್ಲಿಯ ಪೌರತ್ವ ಕಾನೂನು ವಿರುದ್ಧ ಹೋರಾಟ ನಡೆಯುವ ಸ್ಥಳದ ಹತ್ತಿರದ ಒಂದು ಕಟ್ಟಡದಿಂದ ಪ್ರತಿಭಟಕಾರರ ಮೇಲೆ ಗುಂಡು ಹಾರಿಸಲಾಗಿದ್ದು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಮತ್ತು ಈ ವೇಳೆ ಪೊಲೀಸರು ಮೂಕಪ್ರೇಕ್ಷರಾಗಿ ನಿಂತಿದ್ದರು ಎಂಬ ವರದಿ ಪ್ರಸಾರವಾಗಿತ್ತು. ಈ ವರದಿಯನ್ನು ಏಕಪಕ್ಷೀಯ ಎಂದು ಕರೆದು ನೋಟಿಸು ಜಾರಿ ಮಾಡಿ ನಂತರ ಚ್ಯಾನೆಲನ್ನು ನಿಷೇಧಿಸಲಾಯಿತು. ಆದರೆ ಈಗ ನಿಷೇಧ ತೆರವುಗೊಳಿಸಲಾಗಿದೆ.