ಅವರೇ ನಿಷೇಧ ಹೇರಿದರು; ಅವರೇ ತೆರವುಗೊಳಿಸಿದರು- ಮೀಡಿಯ ವನ್

0
751

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 7: ಮೀಡಿಯ ವನ್ ಟಿವಿ ಚ್ಯಾನೆಲ್‍ಗೆ ಕೇಂದ್ರ ವಾರ್ತಾ ಪ್ರಸಾರ ಸಚಿವಾಲಯ ಹೇರಿದ್ದ ನಿಷೇಧವನ್ನು ಅದುವೇ ತೆರವುಗೊಳಿಸಿದೆ. ಶನಿವಾರ ಬೆಳಗ್ಗೆ 9:30ಕ್ಕೆ ಚ್ಯಾನೆಲ್ ಪ್ರಸಾರ ಪುನಃ ಆರಂಭಿಸಿದ್ದು ಹದಿನಾಲ್ಕುಗಂಟೆಗಳ ಬಳಿಕ ಹೇರಿದ ನಿಷೇಧವನ್ನು ಕೇಂದ್ರ ಸರಕಾರವೇ ತೆಗೆದುಹಾಕಿದೆ. ಏಷ್ಯನೆಟ್‍ನ ವಿರುದ್ಧ ಹೇರಿದ ನಿಷೇಧವನ್ನು ಶನಿವಾರ ಬೆಳಗ್ಗೆ ಒಂದು ಗಂಟೆಗೆ ಸರಕಾರ ತೆರವುಗೊಳಿಸಿತ್ತು.

ನಿಷೇಧವನ್ನು ಕಾನೂನು ಮೂಲಕ ಎದುರಿಸಲು ಸಿದ್ಧತೆ ಆರಂಭಿಸಿದಾಗ ಪ್ರಸಾರವನ್ನು ಪುನಃ ಅರಂಭಿಸುವ ಅನುಮತಿ ಸಿಕ್ಕಿತು. ಈ ವಿಷಯದಲ್ಲಿ ಮೀಡಿಯ ವನ್ ಕ್ಷಮೆಯಾಚಿಸಿಲ್ಲ ಎಂದು ಮಾಧ್ಯಮ ಮೀಡಿಯವನ್ ಗ್ರೂಪ್ ಎಡಿಟರ್ ಒ. ಅಬ್ದುರ್ರಹ್ಮಾನ್ ತಿಳಿಸಿದರು.

ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಗಟ್ಟಿಯಾಗಿ ನಿಂತು ಸತ್ಯ, ನ್ಯಾಯಾಧಾರಿತವಾಗಿ ಮಾಧ್ಯಮ ಚಟುವಟಿಕೆಯನ್ನು ಅತ್ಯಂತ ಶಕ್ತಿಶಾಲಿಯಾಗಿ ಮುಂದುವರಿಸುವೆವು ಎಂದು ಮೀಡಿಯ ವನ್ ಎಡಿಟರ್ ಇನ್ ಚೀಫ್ ಸಿ ಎಲ್ ಥಾಮಸ್ ಹೇಳಿದರು. ಚ್ಯಾನೆಲ್ ಅನುಸರಿಸುತ್ತಾ ಬಂದ ದಾರಿಯನ್ನು ಮುಂದೆಯೂ ಮುಂದುವರಿಸುತ್ತೇವೆ. ಅದಕ್ಕಾಗಿ ಎಲ್ಲ ಜನರ ಬೆಂಬಲವನ್ನು ಕೇಳುತ್ತಿದ್ದೇವೆ ಎಂದು ಥಾಮಸ್ ಹೇಳಿದರು.

ನಿಷೇಧ ಜಾರಿಗೊಳಿಸಿದ ಬಳಿಕ ಕೇಂದ್ರ ವಾರ್ತಾ ಪ್ರಸಾರ ಸಚಿವಾಲಯದಿಂದ ಸೂಚನೆ ಅಧಿಕೃತವಾಗಿ ಸಿಕ್ಕಿತ್ತು. ಕತ್ತಲೆಯಲ್ಲಾದ ಹದಿನಾಲ್ಕು ಗಂಟೆಗಳಲ್ಲಿ ಚ್ಯಾನೆಲನ್ನು ಬೆಂಬಲಿಸಿದ ಊರವರು, ರಾಜಕಾರಣಿಗಳು, ಆಂದೋಲನಗಳಿಗೆ ಕೃತಜ್ಞೆ ಸೂಚಿಸುವುದಾಗಿ ಎಡಿಟರ್ ಇನ್ ಚೀಫ್ ತಿಳಿಸಿದ್ದಾರೆ. ದಿಲ್ಲಿ ಕೋಮು ಗಲಭೆಯನ್ನು ಪಕ್ಷಪಾತದಿಂದ ವರದಿ ಮಾಡಲಾಗಿದೆ ಎಂದು ಮೀಡಿಯ ವನ್ ಮೇಲೆ ಆರೋಪ ಹೊರಿಸಲಾಗಿತ್ತು. ಏಷ್ಯನೆಟ್ ಚ್ಯಾನೆಲ್‍ಗೂ 48 ಗಂಟೆ ನಿಷೇಧವನ್ನು ಕೇಂದ್ರ ಸರಕಾರ ಹೇರಿತ್ತು. ಶುಕ್ರವಾರ ಸಂಜೆ 7:30ರಿಂದ ರವಿವಾರ ರಾತ್ರೆ 7:30ರವರೆಗೆ ನಿಷೇಧ ಇತ್ತು. ಚ್ಯಾನೆಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪೂರ್ಣ ಪ್ರಸಾರ ತಡೆಯಲಾಯಿತು.
ದಿಲ್ಲಿಯಲ್ಲಿ ಗಲಭೆ ನಡೆದ ಚಾಂದ್ ಬಾಗ್‍ನಲ್ಲಿ ಮುಸ್ಲಿಮರು ಬಹುಸಂಖ್ಯಾತರೆಂಬುದು ವರದಿಯಲ್ಲಿತ್ತು. ಕಲ್ಲೆಸೆತ. ಕೊಳ್ಳಿಯಿಡುವಿಕೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ಮೀಡಿಯ ವನ್ ತೋರಿಸಿತ್ತು. ಆರಾಧಾನಾಲಯಗಳಿಗೂ ಒಂದು ಪ್ರತ್ಯೇಕ ಸಮುದಾಯದ ಮೇಲೆ ಅತಿಕ್ರಮಗಳನ್ನು ಎತ್ತಿ ತೋರಿಸುವುದು ವರದಿಯಲ್ಲಿತ್ತು ಎಂದು ವಾರ್ತಾ ಪ್ರಸಾರ ಇಲಾಖೆಯ ನೋಟಿಸಿನಲ್ಲಿತ್ತು.

ವರದಿಯಲ್ಲಿ ಆರೆಸ್ಸೆಸನ್ನು ಪ್ರಶ್ನಿಸಲಾಗಿತ್ತು. ದಿಲ್ಲಿ ಪೊಲೀಸರ ನಿಷ್ಕ್ರಿಯತೆ ಎಂದೂ ಆರೋಪಿಸಲಾಗಿತ್ತು . ದಿಲ್ಲಿ ಪೊಲೀಸರು ಮತ್ತು ಆರೆಸ್ಸೆಸ್ಸನ್ನು ಟೀಕಿಸಿದ್ದು ನೋಟಿಸಿನಲ್ಲಿ ಬೆಟ್ಟುಮಾಡಿ ತೋರಿಸಲಾಗಿತ್ತು. ಇಂತಹ ಪ್ರಸಾರ ರೀತಿ ಅಕ್ರಮಕ್ಕೆ ಆಸ್ಪದ ನೀಡುತ್ತದೆ, ಕಾನೂನು ಸುಸ್ಥಿತಿಗೆ ಅಪಾಯಕಾರಿಯೆಂದು ಸಚಿವಾಲಯ ಹೇಳಿತ್ತು.

ಏಷ್ಯನೆಟ್ ಫೆಬ್ರವರಿ 25ರಂದು ಪ್ರಸಾರ ಮಾಡಿದ ವರದಿ ಮೇಲೆ ಕ್ರಮ ಜರಗಿಸಲು ಕಾರಣವೆಂದು ನೋಟಿಸಿನಲ್ಲಿ ತಿಳಿಸಲಾಗಿತ್ತು. ಏಷ್ಯನೆಟ್ ನ್ಯೂಸ್ ವರದಿಯನ್ನು ಏಕಪಕ್ಷೀಯವೆಂದು ಬೆಟ್ಟುಮಾಡಲಾಗಿತ್ತು. ಆಯುಧ ಹಿಡಿದ ಗಲಭೆಕೋರರು ಧರ್ಮ ಕೇಳಿ ದಾಳಿ ಮಾಡುತ್ತಿದ್ದಾರೆ. ನೂರಾರು ಅಂಗಡಿಗಳು, ಮನೆಗಳು, ವಾಹನಗಳನ್ನು ಬೆಂಕಿಗಾಹುತಿ ಮಾಡಿದ್ದಾರೆ. 160 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತರು. ಗಲಭೆಕೋರರು ತಾಂಡವವಾಡಿದರು. ಉತ್ತರಪೂರ್ವ ದಿಲ್ಲಿಯಲ್ಲಿ ಒಂದು ತಿಂಗಳು ಕರ್ಫ್ಯೂ ಘೋಷಿಸಲಾಯಿತು. ಜಾಫರಾಬಾದಿನಲ್ಲಿ ಮೌಜ್‍ಪುರಿಯಲ್ಲಿ ಮಸೀದಿಗೆ ಬೆಂಕಿಕೊಡಲಾಯಿತು. ಪೊಲೀಸರು ಬರೇ ನೋಡುತ್ತಾ ನಿಂತರು. ಅಗ್ನಿಶಾಮಕ ದಳ ಎರಡು ಗಂಟೆಯ ನಂತರ ಬಂದಿತ್ತು. ಗಲಭೆಕೋರರು ರಸ್ತೆ ತಡೆಯೊಡ್ಡಿ ಧರ್ಮ ಕೇಳಿ ಹೊಡೆದರು. ಹಿಂದು ಬಹುಸಂಖ್ಯಾತ ಪ್ರದೇಶದ ಮನೆಗಳಿಗೆ ಬೆಂಕಿ ಕೊಡಲಾಯಿತು ಎಂದು ವರದಿಯಲ್ಲಿತ್ತು ಎಂದು ಆರೋಪಿಸಲಾಗಿದೆ.