ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಷೇರು ಮಾರಾಟಕ್ಕೆ ನಿರ್ಧಾರ: ಲಾಭದಾಯಕ ಸರಕಾರೀ ಸಂಸ್ಥೆ ಖಾಸಗಿಗಳ ತೆಕ್ಕೆಗೆ

0
1032

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 7: ದೇಶದ ಎರಡನೆ ಅತಿದೊಡ್ಡ ಸಾರ್ವಜನಿಕ ತೈಲ ಸರಬರಾಜು ಕಂಪೆನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಶೇರು ಖರೀದಿಗೆ ಕೇಂದ್ರ ಸರಕಾರ ಆಹ್ವಾನ ನೀಡಿದೆ. ಶೇ.52.98 ಶೇರುಗಳನ್ನು ಕೇಂದ್ರ ಸರಕಾರ ಮಾರಲು ಹೊರಟಿದೆ. ಲಾಭದಲ್ಲಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಎದ್ದಿರುವ ಸಂದರ್ಭದಲ್ಲಿ ಸರಕಾರ ಮಾರಾಟಕ್ಕೆ ಆಸಕ್ತರಿಂದ ಅರ್ಜಿ ಕರೆದಿದೆ. ವಿದೇಶಿ ಕಂಪೆನಿಗಳಿಗೂ ಶೇರು ಖರೀದಿಸಲು ಆಗುವ ರೀತಿಯಲ್ಲಿ ಅರ್ಜಿ ಆಹ್ವಾನಿಸಿದೆ. 10 ಬಿಲಿಯನ್ ಡಾಲರ್ ಆಸ್ತಿಯಿರುವ ಕಂಪೆನಿಗೆ ಶೇರುಗಳನ್ನು ಖರೀದಿಸಲು ಸಾಧ್ಯವಿದೆ. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗೆ ಶೇರು ಖರೀದಿಸಲು ಆಗುವುದಿಲ್ಲ ಎಂದು ಕೇಂದ್ರ ಸರಕಾರ ಮೊದಲೇ ತಿಳಿಸಿತ್ತು.

ಬಿಪಿಸಿಎಲ್ ಮಹಾರತ್ನ ಸ್ಥಾನವಿರುವ ಸಾರ್ವಜನಿಕ ಕ್ಷೇತ್ರದ ತೈಲ ಕಂಪೆನಿ. ಜಗತ್ತಿನಲ್ಲಿ ಅತ್ಯಂತ ಲಾಭದಾಯಕವಾಗಿರುವ 500 ಉದ್ಯಮಿ ಸಂಸ್ಥೆಗಳಲ್ಲಿ ಇದೂ ಒಂದು. ಇದನ್ನು ಸರಕಾರ ಖಾಸಗಿಗಳಿಗೆ ಕೊಡಲು ಸಿದ್ಧವಾಗಿದೆ. ದೇಶದ ಪೆಟ್ರೋಲಿಯಂ ವಿತರಣೆಯ ಶೇ. 25 ಬಿಪಿಸಿಎಲ್ ನಿಯಂತ್ರಣದಲ್ಲಿದೆ. ಬಿಪಿಸಿಎಲ್ ಸಹಿತ ಐದು ಸಾರ್ವಜನಿಕ ವಲಯದ ಸಂಸ್ಥೆಳ ಶೇರು ಮಾರಾಟಕ್ಕೆ ಕ್ಯಾಬಿನೆಟ್ ಅನುಮತಿ ನೀಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ತಿಳಿಸಿದ್ದರು. ಭಾರತ್ ಪೆಟ್ರೋಲಿಯಂ ,ಶಿಪ್ಪಿಂಗ್ ಕಾರ್ಪೊರೇಷನ್, ಕಂಟಯ್‍ನರ್ ಕಾರ್ಪೊರೇಷನ್, ತೆಹ್ರಿ ಹೈಡ್ರೊ ಡೆವಲಪ್‍ಮೆಂಟ್ ಕಾರ್ಪೊರೇಷನ್, ನಾರ್ತ ಈಸ್ಟ್ ಇಲಕ್ಟ್ರಿಕ್ ಪವರ್ ಗಳ ಶೇರುಗಳ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಇದಲ್ಲದೆ ಐಒಸಿ, ಎಲ್‍ಐಸಿ, ಒಎನ್‍ಜಿಸಿ ಶೇರುಗಳನ್ನು ಕಡಿಮೆ ಮಾಡಲು ಸರಕಾರ ಯೋಜನೆ ಮಾಡಿಟ್ಟುಕೊಂಡಿದೆ.