ಸನ್ಮಾರ್ಗ ವಾರ್ತೆ
ಚೆನ್ನೈ, ಮಾ. 12: ತಮಿಳ್ನಾಡಿನ ಮುಖ್ಯಮಂತ್ರಿ ಸ್ಥಾನವನ್ನು ತಾನು ಬಯಸುವುದಿಲ್ಲ. ಆದರೆ ರಾಜಕೀಯದಲ್ಲಿ ಬದಲಾವಣೆ ಆಗಬೇಕೆ೦ದು ರಜನೀಕಾಂತ್ ಹೇಳಿದ್ದಾರೆ. ರಾಜಕೀಯ ವ್ಯವಸ್ಥೆ ಬದಲಾಗಬೇಕೆಂದು ಮಕ್ಕಳ್ ಮನ್ರಂ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ರಜನಿ ಹೇಳಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಚೆನ್ನೈ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಪಾರ್ಟಿ ಕಾರ್ಯದರ್ಶಿಗಳ ಸಭೆಯ ನಂತರ ರಜನೀಕಾಂತ್ ತನ್ನ ರಾಜಕೀಯ ನೀತಿಯನ್ನು ಘೋಷಿಸಿದರು.
ರಾಜಕೀಯದಲ್ಲಿ ಶಿಕ್ಷಣ, ಅರ್ಹತೆ, ಪ್ರಾಯ ಕಡ್ಡಾಯವಾಗಿ ಪರಿಗಣಿಸಲಾಗುವುದು ಎಂದು ರಜನಿ ಹೇಳಿದರು. ರಾಜಕೀಯ ಮಾತ್ರವಲ್ಲ ,ಜನರ ಮನಸ್ಸಿನಲ್ಲಿಯೂ ಬದಲಾವಣೆ ಆಗಬೇಕು. ಪಾರ್ಟಿಯ ಶೇ.65 ಸ್ಥಾನಗಳನ್ನು ಯುವಕರಿಗೆ ನೀಡಲಾಗುವುದು. ನಿವೃತ್ತ ಅಧಿಕಾರಿಗಳನ್ನು ರಾಜಕೀಯಕ್ಕೆ ಕರೆತರುವೆ. ರಾಜಕೀಯ ಉತ್ತಮಗೊಳ್ಳದೆ ಪಾರ್ಟಿಗಳಿದ್ದು ಪ್ರಯೋಜನವಿಲ್ಲ. ಭರವಸೆ ಈಡೇರಿಸಲು ತಜ್ಞ ಸಮಿತಿ ರೂಪಿಸಲಾಗುವುದು ಎಂದು ರಜನಿ ಘೋಷಿಸಿದರು. ತಮಿಳ್ನಾಡಿನ ರಾಜಕೀಯದಲ್ಲಿ ಈವರೆಗೆ ಇಬ್ಬರು ಮಹಾರಥರಿದ್ದರು. ಜಯಲಲಿತಾ, ಕರಣಾನಿಧಿ. ಜನರು ಇವರಿಗೆ ವೋಟು ಕೊಟ್ಟಿದ್ದಾರೆ. ಆದರೆ ಬದಲಾವಣೆಗಳಾಗಿಲ್ಲ. ಬದಲಾವಣೆಗಾಗಿ ಹೊಸ ರಾಜಕೀಯ ಪಕ್ಷ ಅಗತ್ಯವೆಂದು ರಜನೀಕಾಂತ್ ಹೇಳಿದರು.
2017 ಡಿಸೆಂಬರ್ 31ಕ್ಕೆ ರಜನೀಕಾಂತ್ ತನ್ನ ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ರಜನೀಕಾಂತ್ ಪಾರ್ಟಿಯನ್ನು ಘೋಷಿಸಿರಲಿಲ್ಲ. ಇದಕ್ಕೆ ಸ್ಪಷ್ಟ ಯೋಜನೆಯನ್ನು ಕಾರ್ಯದರ್ಶಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಸೂಚನೆ ಲಭಿಸಿದೆ.












