ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಮಾ. 14: ಕೊರೊನಾ ವೈರಸ್‍ನಿಂದ ಅತ್ಯಂತ ಗಂಭೀರ ಪರಿಸ್ಥಿತಿ ಇರುವುದರಿಂದ ಅಮೆರಿಕದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ವೈರಸ್ ತಡೆಯಲು 50 ಬಿಲಿಯನ್ ಡಾಲರ್ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ್ದಾರೆ. ಕೊರೊನಾ ವೈರಸ್ ಅಮೆರಿಕದಲ್ಲಿ 41 ಮಂದಿಯ ಜೀವವನ್ನು ಈವರೆಗೆ ತೆಗೆದಿದೆ.
ತುರ್ತು ಪರಿಸ್ಥಿತಿ ಘೋಷಿಸಿರುವುದರಿಂದ ನ್ಯಾಶನಲ್ ಫೆಟರಲ್ ಎಮರ್ಜನ್ಸಿ ಮ್ಯಾನೇಜ್‍ಮೆಂಟ್ ಏಜೆನ್ಸಿಯು ರಾಜ್ಯ, ಪ್ರಾದೇಶಿಕ ಸರಕಾರಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಜನರ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚು ಸುಲಭಗೊಳಿಸುವುದಕ್ಕಾಗಿ ಕಾನೂನಿನಲ್ಲಿ ವಿನಾಯಿತಿಗೂ ಅನುಮತಿಸಲಾಗಿದೆ. ತುರ್ತು ಕಾರ್ಯನಿರ್ವಹಣಾ ಕೇಂದ್ರಗಳನ್ನು ಕೂಡಲೇ ಸಿದ್ಧಪಡಿಸುವಂತೆ ಎಲ್ಲ ರಾಜ್ಯಗಳಿಗೆ ಟ್ರಂಪ್ ಆಗ್ರಹಿಸಿದ್ದಾರೆ. ಅಮೆರಿಕದ ಕೆಲವು ರಾಜ್ಯಗಳು ಈಗಾಗಲೇ ಪ್ರಾದೇಶಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ.












