ಕರ್ನಾಟಕದ ಶಾಹೀನ್ ಬಾಗ್ ಗೆ ನಾಳೆ 50ನೇ ದಿನ; ಇಲ್ಲಿ ಧರಣಿ ಕೂತಿರುವ ತಾಯಂದಿರ ಮಾತುಗಳು ಇವು

0
1061

ಸನ್ಮಾರ್ಗ ವಾರ್ತೆ

ರಾಯಚೂರು, ಮಾ. ಸಿಎಎ, ಎನ್ ಪಿ ಆರ್ ಮತ್ತು ಎನ್ ಆರ್ ಸಿಯನ್ನು ವಿರೋಧಿಸಿ ರಾಯಚೂರಿನ ಮಹಿಳೆಯರು ಆರಂಭಿಸಿರುವ ಪ್ರತಿಭಟನೆ- ರಾಯಚೂರ್ ಶಾಹಿನ್ ಬಾಗ್ ಗೆ -ಮಾರ್ಚ್ 15ರಂದು 50 ದಿನಗಳು ತುಂಬಲಿದ್ದು ಅಂದು ಇಲ್ಲಿನ ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ಕಳೆದ ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ಕೆಲವೇ ಮಹಿಳೆಯರು ಆರಂಭಿಸಿದ ಈ ಪ್ರತಿಭಟನೆಯಲ್ಲಿ ಈವರೆಗೆ 700 ರಷ್ಟು ಮಹಿಳೆಯರು ಭಾಗವಹಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ಸಂಚಾಲಕಿ ಆಗಿರುವ ಸಲ್ಮಾನ್ ಖಾನ್ ಅವರ ಪ್ರಕಾರ,

ಮಹಿಳೆಯರು ಇವತ್ತು ಸರಕಾರದ ಜನವಿರೋಧಿ ನೀತಿಯ ವಿರುದ್ಧ ಬೀದಿಯಲ್ಲಿ ಇದ್ದಾರೆ. ಇದೊಂದು ಹೊಸ ಬೆಳವಣಿಗೆ. ಈ ದೇಶವನ್ನು ರಕ್ಷಿಸುವುದಕ್ಕಾಗಿ ಮಹಿಳೆಯರು ಟೊಂಕಕಟ್ಟಿ ನಿಂತಿರುವುದು ಸ್ವಾಗತಾರ್ಹ. ಕರ್ನಾಟಕ ಎಂಬುದು ಯೋಧರ, ಹೋರಾಟಗಾರರ ನಾಡು. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮ ಅವರು ಬ್ರಿಟಿಷರ ವಿರುದ್ಧ ಹೋರಾಡಿದರು. ಈ ಹೋರಾಟ ಸದಾ ನಮಗೆ ಪ್ರೇರಣೆಯಾಗಿದೆ ಎಂದವರು ಹೇಳಿದರು.

ಇನ್ನೋರ್ವ ಸಂಚಾಲಕಿ ತಯ್ಯಬಾ ಮಾತನಾಡಿ, ಈ ಪ್ರತಿಭಟನೆಯು ಗಾಂಧಿ ಮಾದರಿಯ ಅಹಿಂಸಾತ್ಮಕ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಇಲ್ಲಿ ಧರಣಿ ಕೂತಿರುವ ಮಹಿಳೆಯರು ವಾರದಲ್ಲಿ ಒಂದು ದಿನ ನಗರದಾದ್ಯಂತ ಮಾರ್ಚ್ ನಡೆಸುತ್ತಾರೆ. ನಾವು ಪ್ರತಿಭಟನಾ ಸಭೆಯಲ್ಲಿ ಸಂವಿಧಾನವನ್ನು ಓದುವ ಮತ್ತು ಹಾಡುಗಳನ್ನು ಹಾಡುವ ಮೂಲಕ ಜೀವಂತ ಇಟ್ಟುಕೊಂಡಿದ್ದೇವೆ. ನಮ್ಮ ಪಾಲಿಗೆ ಟಿಪ್ಪು ಗಾರ್ಡನ್ ಎಂಬುದು ಹೊಸಮನೆ. ಧರಣಿ ನಡೆಸುವುದಕ್ಕೆ ನಮಗೆ ಬೆಳಗ್ಗಿನಿಂದ ರಾತ್ರಿ 9.30 ರವರೆಗೆ ಅನುಮತಿಯಿದೆ. ರಾತ್ರಿ ನಾವು ಮನೆಗೆ ತೆರಳುತ್ತೇವೆ ಮತ್ತು ಬೆಳಿಗ್ಗೆ ಮತ್ತೆ ಇಲ್ಲಿ ಬಂದು ಧರಣಿ ಕೂರುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಧರಣಿಗೆ ಸಿಟಿಜನ್ ಫಾರಂ ಫಾರ್ ಕಾನ್ಸ್ಟಿಟ್ಯೂಷನ್ ರೈಟ್ಸ್ ನ ಬೆಂಬಲವಿದೆ ಮತ್ತು ದಲಿತ ಸಂಘಟನೆಗಳ ಬೆಂಬಲವೂ ಇದೆ.