ಸನ್ಮಾರ್ಗ ವಾರ್ತೆ
ಭಟ್ಕಳ: ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಎಚ್.ಆರ್.ಎಸ್ ವಿಭಾಗವು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದೊಂದಿಗೆ ತಾಲೂಕಿನ ಎರಡು ಗ್ರಾಮಗಳಾದ ಮರಂಬಳ್ಳಿ ಹಾಗೂ ಕಸಲಗದ್ದೆಗಳಿಗೆ 50 ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳಾಗಿರುವ ಅಹಾರ ಸಾಮಗ್ರಿಗಳನ್ನು ಸೋಮವಾರ ವಿತರಿಸಲಾಯಿತು.
ಎರಡೂ ಗ್ರಾಮಗಳಲ್ಲಿನ ಒಟ್ಟು ಸುಮಾರು 50 ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಜಮಾತೆ ಇಸ್ಲಾಮಿ ಹಿಂದ್ ಅವರು ನಮ್ಮೊಂದಿಗೆ ಎರಡು ಗ್ರಾಮಗಳಿಗೆ ಅಗತ್ಯವಿರುವ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದರಲ್ಲದೇ, ಮಾನವೀಯ ನೆಲೆಯಲ್ಲಿ ಅಗತ್ಯವಿದ್ದವರಿಗೆ ಈ ರೀತಿಯಾಗಿ ದಿನಸಿ ಸಾಮಗ್ರಿಗಳು, ತರಕಾರಿ, ಅಕ್ಕಿಯನ್ನು ವಿತರಿಸಿದ ಅವರ ಕಾರ್ಯವನ್ನು ಶ್ಲಾಘಿಸಿದರು.
ಜಮಾಆತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮೌಲಾನಾ ಸೈಯ್ಯದ್ಎಸ್.ಎಂ. ಝುಬೇರ್ ಮಾರ್ಕೇಟ್ ಮಾತನಾಡಿ,ದೇವರು ಇಂದು ಎಲ್ಲರಿಗೂ ಸಂಕಷ್ಟವನ್ನು ನೀಡಿದ್ದಾನೆ. ಇಲ್ಲಿನ ಜನತೆಗೆ ಕಷ್ಟದ ಅರಿವಿಲ್ಲವಾಗಿತ್ತು. ಪತ್ರಕರ್ತರು ಈ ಒಂದು ಅವಕಾಶವನ್ನು ಮಾಡಿಕೊಟ್ಟಿದ್ದು ಅವರಿಗೆ ಆಭಾರಿಯಾಗಿದ್ದೇನೆ ಎಂದರಲ್ಲದೇ ಸಂಕಷ್ಟದ ಸಮಯದಲ್ಲಿ ಮಾನವೀಯತೆಯ ದೃಷ್ಟಿಯಿಂದ ನಾವು ಸಹಕರಿಸುತ್ತಾ ಬಂದಿದ್ದೇವೆ. ಯಾವುದೇ ಸಂದರ್ಭದಲ್ಲಿ ಸಹಾಯ ಮಾಡಲು ತಾವು ಸಿದ್ಧರಿರುವುದಾಗಿ ಹೇಳಿದರು.
ಜಿಲ್ಲಾ ಕಾ.ನಿ. ಪತ್ರಕರ್ತರ ಸಂಘದ ಸದಸ್ಯ ಎಂ.ಆರ್.ಮಾನ್ವಿ ಮಾತನಾಡಿ, ಕೊರೊನಾ ಸಂಕಷ್ಟ ದೇಶಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಅಪ್ಪಳಿಸಿದೆ.ಇಂದು ಬಡವ, ಬಲ್ಲಿದ ಎನ್ನುವ ಬೇಧವಿಲ್ಲದೇ ಜನತೆ ಸಂಕಷ್ಟದಲ್ಲಿದ್ದಾರೆ.ಅಂತಹ ಜನರಿಗೆ ಕಿಂಚಿತ್ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದರು.
ತಾಲೂಕಾ ಸಂಘದ ಮಾಜಿ ಅಧ್ಯಕ್ಷ ಸತೀಶ ಕುಮಾರ್ ನಾಯ್ಕ ಮಾತನಾಡಿ, ಮರಂಬಳ್ಳಿ ಹಾಗೂ ಕಸಲಗದ್ದೆಯಲ್ಲಿ ಬಡಜನರೇ ಹೆಚ್ಚು ವಾಸ್ತವ್ಯ ಮಾಡಿಕೊಂಡಿದ್ದಾರೆ. ಅವರಿಗೆ ಸಹಕರಿಸಿದ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಫಯಾಜ್ ಮುಲ್ಲಾ, ತಾಲೂಕಾ ಸಮಿತಿ ಕಾರ್ಯದರ್ಶಿ ಮೋಹನ ನಾಯ್ಕ, ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ತಾಲೂಕಾ ಸಮಿತಿ ಉಪಾಧ್ಯಕ್ಷ ರಿಜ್ವಾನ್ ಗಂಗಾವಳಿ, ಖಜಾಂಚಿ ಅತೀಕುರ್ರೆಹಮಾನ್ ಶಾಬಂದ್ರಿ, ರಾಘವೇಂದ್ರ ಮಲ್ಯ, ಎಚ್.ಆರ್.ಎಸ್.ನ ಖಮರುದ್ದೀನ್ ಮಷಾಯಿಖ್, ಎಸ್.ಐ.ಓ ನ ಸೈಯ್ಯದ್ ಶುಯೇಬ್ ಎಸ್.ಎಂ, ಸೈಯ್ಯದ್ ಉಝೈರ್ ಎಸ್.ಎಂ ಹಾಗೂ ಸೈಫಾನ್ಅರ್ಮಾರ್ ಉಪಸ್ಥಿತರಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












