ಬಿ ಆರ್ ಶೆಟ್ಟಿ ಮತ್ತು ಕುಟುಂಬದ ಹಣಕಾಸು ಖಾತೆಗಳ ಮುಟ್ಟುಗೋಲು: ಯುಎಇ ಬಿಲಿಯನೇರ್ ಇಕ್ಕಟ್ಟಿನಲ್ಲಿ

0
1904

ಸನ್ಮಾರ್ಗ ವಾರ್ತೆ

ಎನ್‌ಎಂಸಿ ಹೆಲ್ತ್ ಮತ್ತು ಯುಎಇ ಎಕ್ಸ್‌ಚೇಂಜ್ ಸಂಸ್ಥಾಪಕ ಬವಗುತ್ತು ರಘುರಾಮ್ (ಬಿ.ಆರ್.) ಶೆಟ್ಟಿ ಫೆಬ್ರವರಿಯಿಂದ ತೊಂದರೆಯಲ್ಲಿದ್ದಾರೆ. ಡಿಸೆಂಬರ್‌ನಿಂದ ಕಂಪನಿಯ ಷೇರುಗಳು ಶೇಕಡಾ 70 ಕ್ಕಿಂತಲೂ ಅಧಿಕ ಮಟ್ಟದಲ್ಲಿ ಕುಸಿದ ನಂತರ ಯುಎಇ ಮೂಲದ ಈ ಬಿಲಿಯನೇರ್ ಫೆಬ್ರವರಿಯಲ್ಲಿ ಎನ್‌ಎಂಸಿ ಹೆಲ್ತ್‌ನ ಸಹ-ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಡಿದ್ದಾರೆ.

ಬಿ.ಆರ್. ಶೆಟ್ಟಿ ಅವರು 1973 ರಲ್ಲಿ ಉಡುಪಿಯಿಂದ ಯುಎಇಗೆ ವಲಸೆ ಬಂದು ಔಷಧ ಮಾರಾಟಗಾರನಾಗಿ ಕೆಲಸ ಪ್ರಾರಂಭಿಸಿದರು. ಆ ಬಳಿಕ ಹಂತ ಹಂತವಾಗಿ ಬೆಳೆದು ವಿಶ್ವದ ಅತ್ಯಂತ ಶ್ರೀಮಂತ ಕನ್ನಡಿಗ ಎಂದು ಪರಿಗಣಿಸಲ್ಪಟ್ಟರು. , 2019 ರಲ್ಲಿ ಸುಮಾರು 153.15 ಬಿಲಿಯನ್ ಆಸ್ತಿಯನ್ನು ಅವರು ಹೊಂದಿದ್ದರು. ಎನ್‌ಎಂಸಿ ಹೆಲ್ತ್ 19 ದೇಶಗಳಲ್ಲಿ ಸುಮಾರು 200 ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳನ್ನು ನಿರ್ವಹಿಸುತ್ತಿದೆ.

ದುರ್ವ್ಯವಹಾರದ ಆರೋಪಗಳು ಕೇಳಿ ಬಂದ ನಂತರ, ಎನ್‌ಎಂಸಿ ಹೆಲ್ತ್‌ಗೆ 6 ಬಿಲಿಯನ್ ಡಾಲರ್ ಸಾಲವಿದೆ ಎಂದು ವರದಿಯಾಗಿದೆ.

ಇದೀಗ ಬಿ.ಆರ್. ಶೆಟ್ಟಿ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಕಂಪನಿಗಳನ್ನು ಯುಎಇಯ ಸೆಂಟ್ರಲ್ ಬ್ಯಾಂಕ್ ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಅದೇವೇಳೆ, ಶೆಟ್ಟಿ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ಹಣಕಾಸು ಖಾತೆಗಳನ್ನು ಮುಟ್ಟುಗೋಲು ಹಾಕಲು ಯುಎಇಯ ಸೆಂಟ್ರಲ್ ಬ್ಯಾಂಕ್ ಆದೇಶಿಸಿರುವುದಾಗಿ ಯುಎಇ ಮಾಧ್ಯಮಗಳು ವರದಿ ಮಾಡಿವೆ.

ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ಶೆಟ್ಟಿ ಮತ್ತು ಮಾಜಿ ಸಿಇಒ ಪ್ರಸನಾಥ ಮಂಗತ್ ಸೇರಿದಂತೆ ಆರು ಜನರ ವಿರುದ್ಧ’ ವಂಚನೆ ಆರೋಪ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಸಹೋದರನನ್ನು ನೋಡುವ ಸಲುವಾಗಿ ಶೆಟ್ಟಿ ಅವರು ಫೆಬ್ರವರಿಯಲ್ಲಿ ಭಾರತಕ್ಕೆ ಹಿಂತಿರುಗಿದ್ದು, ಇನ್ನೂ ಮರಳಿ ದುಬೈಗೆ ಹೋಗಿಲ್ಲ.

ವಿಶೇಷವೆಂದರೆ, ಬಿ.ಆರ್. ಶೆಟ್ಟಿ ಅವರು ಯುಎಇಗೆ ಹೋಗುವ ಮೊದಲು ಬಿಜೆಪಿಯ ಪೂರ್ವ ಪಕ್ಷವಾದ ಜನ ಸಂಘದ ಕಾರ್ಯಕರ್ತರಾಗಿದ್ದರು. 1960 ರ ದಶಕದಲ್ಲಿ ಉಡುಪಿಯಲ್ಲಿ ನಡೆದ ನಾಗರಿಕ ಚುನಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಶೆಟ್ಟಿ ಪರ ಪ್ರಚಾರ ನಡೆಸಿದ್ದರು. ಅಬುಧಾಬಿಯಲ್ಲಿ ಇತ್ತೀಚೆಗೆ ಮೋದಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.