ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 30: ಪೌರತ್ವ ಕಾನೂನು ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ದಿಲ್ಲಿಯ ಕೋಮು ಘರ್ಷಣೆ ಪ್ರಕರಣದಲ್ಲಿ ಸಿಕ್ಕಿಸಿಹಾಕಿ ಬಂಧಿಸಿರುವ ಮೂರು ತಿಂಗಳ ಗರ್ಭೀಣಿ ಜಾಮಿಅ ಮಿಲ್ಲಿಯ ಸಂಶೋಧನಾ ವಿದ್ಯಾರ್ಥಿನಿ ಸಫೂರ ಸರ್‍ಗರ್ ರನ್ನು ತಿಹಾರ್ ಜೈಲಿನಲ್ಲಿ ಏಕಾಂತ ಕೋಣೆಗೆ ತಳ್ಳಲಾಗಿದೆ. ಸಫೂರ ತಿಹಾರ್ ಜೈಲಿನಲ್ಲಿ ರಮಝಾನ್ ಉಪವಾಸ ಆಚರಿಸುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರ ಜೈಲಿನಲ್ಲಿ ಸಫೂರ ಏಕಾಂತ ಸೆಲ್‍ನಲ್ಲಿದ್ದಾರೆ ಎಂದು ಮಹಿಳಾ ಸೆಲ್ ಸುಪರಿಟೆಂಡೆಂಟ್ ಸರಿತಾ ತಿಳಿಸಿದರು. ಗರ್ಭಿಣಿಯಾಗಿರುವುದರಿಂದ ವೈದ್ಯಕೀಯ ನೆರವು, ಆಹಾರ ಸಹಿತ ಎಲ್ಲ ಸೌಕರ್ಯವನ್ನು ಸಫೂರಗೆ ಮಾಡಿಕೊಟ್ಟಿದ್ದೇವೆ. ಜೈಲು ವೈದ್ಯರು ಸಫೂರರನ್ನು ಪರೀಕ್ಷಿಸುತ್ತಿದ್ದಾರೆ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.
ರಮಝಾನ್ ಉಪವಾಸವಾದ್ದರಿಂದ ಉಪವಾಸ ಪಾರಣೆ ಮತ್ತು ಸಹ್ರಿಯನ್ನು ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದೇವೆ ಎಂದು ಅವರು ಹೇಳಿದರು. ಜಾಮಿಅ ಮಿಲ್ಲಿಯ ಇಸ್ಲಾಮಿಯದ ಪೌರತ್ವ ಕಾನೂನು ವಿರುದ್ಧ ಹೋರಾಟಕ್ಕೆ ನೇತೃತ್ವ ನೀಡಿದ್ದ ಸಫೂರ ಜಾಮಿಅ ಕೊ ಅರ್ಡಿನೇಶನ್ ಕಮಿಟಿಯ ಮೀಡಿಯ ಕೋಆರ್ಡಿನೇಟರ್ ಆಗಿದ್ದರು. ಜಾಮಿಅ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪಾರ್ಲಿಮೆಂಟ್ ಮಾರ್ಚ್ ನಡೆಸಿದಾಗ ಪೊಲೀಸರ ಲಾಟಿಚಾರ್ಜ್‍ನಲ್ಲಿ ಸಫೂರ ಗಾಯಗೊಂಡು ಪ್ರಜ್ಞೆ ಕಳಕೊಂಡಿದ್ದರು. ಆದರೆ ಪೌರತ್ವ ಪ್ರತಿಭಟನೆಯ ವಿರುದ್ಧ ಪೂರ್ವ ದಿಲ್ಲಿಯಲ್ಲಿ ಸಂಘಪರಿವಾರ ನಡೆಸಿದ ಕೋಮು ದಾಳಿಯ ಹೆಸರಿನಲ್ಲಿ ಸಫೂರರನ್ನು ಲಾಕ್‍ಡೌನ್ ವೇಳೆ ಬಂಧಿಸಿಡಲಾಗಿದೆ.
ದಿಲ್ಲಿಯ ಮಹಿಳೆಯರ ಪೌರತ್ವ ಹೋರಾಟಕ್ಕೆ ಸಫೂರ ನೇತೃತ್ವ ನೀಡಿದ್ದರು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿದೆ. ಮೊದಲು ಭಾರತೀಯ ಕಾನೂನು ಪ್ರಕಾರ ಆರೋಪ ಹೊರಿಸಿದ ದಿಲ್ಲಿ ಪೊಲೀಸರು ನಂತರ ಸಫೂರ ವಿರುದ್ಧ ಭಯೋತ್ಪಾದನೆ ವಿರುದ್ಧ ಕಾನೂನು ಯುಎಪಿಎ ಆರೋಪ ಹೊರಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












