ಸನ್ಮಾರ್ಗ ವಾರ್ತೆ
ಮುಂಬೈ ಏಪ್ರಿಲ್ 30- ಇರ್ಫಾನ್ ಖಾನ್ ರನ್ನು ನಿನ್ನೆ ಕಳಕೊಂಡ ಹಿಂದಿ ಸಿನಿಮಾ ರಂಗ ಇವತ್ತು ಇನ್ನೋರ್ವ ನಟ ರಿಷಿ ಕಪೂರ್ ರನ್ನು ಕಳಕೊಂಡಿದೆ. ಹಿಂದಿ ಸಿನಿಮಾ ರಂಗದ ಹಿರಿಯ ನಟ ರಿಷಿ ಕಪೂರ್ (67) ಅವರು ಗುರುವಾರ ಬೆಳಿಗ್ಗೆ ಇಲ್ಲಿನ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2018 ರಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಅಮೆರಿಕದಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದು 2019ರ ಸೆಪ್ಟಂಬರ್ ನಲ್ಲಿ ಭಾರತಕ್ಕೆ ವಾಪಸಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಪುನಃ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು.
1970ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಿಷಿ ಆ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು.
ಲುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಉಸಿರಾಟದ ತೊಂದರೆಯೂ ಇತ್ತು. ಇವರು ತಮ್ಮ ಉಸಿರಿನ ಕೊನೆಯ ಕ್ಷಣದವರೆಗೂ ತಮ್ಮ ಸುತ್ತಲೂ ಇರುವವರನ್ನು ನಗಿಸಲು ಸಂತೋಷದಲ್ಲಿಡಲು ಪ್ರಯತ್ನಿಸಿದರು ಎಂದು ಅವರ ಕುಟುಂಬ ಅವರ ನಿಧನದ ಬಳಿಕ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. ತಮ್ಮನ್ನು ಅಭಿಮಾನಿಗಳು ಸದಾ ನಗುವಾಗಿ ನನ್ನನ್ನು ನೆನಪಿನಲ್ಲಿಡಬೇಕು, ಕಣ್ಣೀರಾಗಿ ಅಲ್ಲ ಅನ್ನುವುದು ಅವರ ಆಸೆಯಾಗಿತ್ತು. ಚಿಕಿತ್ಸೆಯ ಅವಧಿಯಲ್ಲಾಗಲಿ ರೋಗ ಭಾದೆಯಲ್ಲಾಗಲಿ ತಮ್ಮ ಉತ್ಸಾಹವನ್ನು ಕಿತ್ತುಕೊಳ್ಳಲು ಅವರು ಅವಕಾಶ ಕೊಟ್ಟಿರಲಿಲ್ಲ. ಅವರು ಸದಾ ಖುಷಿಯಿಂದ ಇರುತ್ತಿದ್ದರು ಎಂದು ಕುಟುಂಬ ಹೇಳಿದೆ.
ರಿಷಿ ಕಪೂರ್ ಅವರು ಪತ್ನಿ ನೀತು, ಪುತ್ರಿ ರಿದ್ಧಿಮ ಕಪೂರ್ ಸಾಹನಿ ಮತ್ತು ಪುತ್ರ ಚಲಚಿತ್ರ ನಟ ರಣಬೀರ್ ಕಪೂರ್ ಅವರನ್ನು ಅಗಲಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












