ಸನ್ಮಾರ್ಗ ವಾರ್ತೆ
ಮಂಗಳೂರು ಎಪ್ರಿಲ್ 30- ಕೋರೋನಾ ಆತಂಕ ದ ಕ ಜಿಲ್ಲೆಯಿಂದ ದೂರವಾಗಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗುರುವಾರ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬೋಳೂರು ಪ್ರದೇಶದ 58 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಆಗಿರುವುದು ದೃಢ ಗೊಂಡಿದೆ.
ಈ ಮಹಿಳೆಯು ಪಡೀಲ್ ಸಮೀಪದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಾಗಿದ್ದು ಅಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯ ಸಂಪರ್ಕಕ್ಕೆ ಬಂದು ಇವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಬಂಟ್ವಾಳದ ಮಹಿಳೆಯರಿಬ್ಬರು ಈಗಾಗಲೇ ಸಾವಿಗೀಡಾಗಿದ್ದಾರೆ.
ಕೆಲವು ದಿನಗಳ ಹಿಂದೆ ಈ ಮಹಿಳೆಗೆ ಜ್ವರ ಬಂದಿದ್ದು, ಅವರ ಗಂಟಲು ಮಾದರಿಯನ್ನು ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಅವರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾತ್ರ ಅಲ್ಲ ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬೋಳೂರು ಪರಿಸರದ ಸುತ್ತ ಪೊಲೀಸರು ಭಾರೀ ನಿಗಾ ಇಟ್ಟಿದ್ದು, ಹಲವು ಕಡೆ ಬ್ಯಾರಿಕೇಡ್ ಗಳನ್ನು ಇರಿಸಿದ್ದಾರೆ ಮತ್ತು ಜನರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ.
ಸದ್ಯ ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 22ಕ್ಕೆ ಏರಿದ್ದು, ಇವರಲ್ಲಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಸಾವಿಗೀಡಾಗಿದ್ದು 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












