ಸನ್ಮಾರ್ಗ ವಾರ್ತೆ
ನವದೆಹಲಿ ಮೇ 2- ದೆಹಲಿಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಬರಹವನ್ನು ಬರೆದಿದ್ದಾರೆ ಎಂದು ಆರೋಪಿಸಿ ಈ ಕೇಸನ್ನು ದಾಖಲಿಸಲಾಗಿದ್ದು ದೆಹಲಿಯ ವಸಂತ್ ಕುಂಜ್ ನ ವ್ಯಕ್ತಿಯೋರ್ವರು ನೀಡಿದ ದೂರಿನಂತೆ ದೆಹಲಿ ಜಂಟಿ ಪೊಲೀಸ್ ಕಮಿಷನರ್ ನೀರಜ್ ಠಾಕೂರ್ ಅವರು ಕೇಸು ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ), 153 ಎ ಮುಂತಾದ ಕಲಂನಡಿ ಅವರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಇದೇ ವೇಳೆ, ತನಗೆ ಎಫ್ ಐ ಆರ್ ಲಭಿಸಿಲ್ಲದಿರುವುದರಿಂದ ತಾನು ಈಗ ಪ್ರತಿಕ್ರಿಯಿಸುವುದಿಲ್ಲ, ಅದು ಲಭ್ಯವಾದ ಬಳಿಕ ಪ್ರತಿಕ್ರಿಯಿಸುವೆ ಎಂದು ಖಾನ್ ಹೇಳಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಇಸ್ಲಾಮೋಫೋಬಿಯಾ ಬಗ್ಗೆ ಅರಬ್ ರಾಷ್ಟ್ರದಲ್ಲಿ ನಡೆದ ಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿ ಅವರು ಮಾಡಿದ ಟ್ವೀಟ್ ನ್ನು ಕಾರಣವಾಗಿಸಿಕೊಂಡು ಅವರ ವಿರುದ್ಧ ದೇಶದ್ರೋಹದ ಕೇಸನ್ನು ಜಡಿಯಲಾಗಿದೆ.
ಭಾರತದ ಮುಸ್ಲಿಮರ ವಿರುದ್ಧ ಇಲ್ಲಿನ ಬಲಪಂಥೀಯ ಗುಂಪುಗಳು ನಡೆಸುತ್ತಿರುವ ದ್ವೇಷ ಪ್ರಚಾರಕ್ಕೆ ಗಲ್ಫ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿರುವುದನ್ನು ಅವರು ತಮ್ಮ ಟ್ವೀಟ್ ನಲ್ಲಿ ಬೆಂಬಲಿಸಿ ಬರೆದಿದ್ದರು. ಮಾತ್ರ ಅಲ್ಲ ಈ ಕುರಿತು ಕುವೈಟ್ ಸರಕಾರಕ್ಕೆ ಅವರ ಅಭಿನಂದನೆಯನ್ನೂ ಸಲ್ಲಿಸಿದ್ದರು.
ಅದೇ ವೇಳೆ ತನ್ನ ಟ್ವೀಟ್ ನಿಂದ ಯಾರಿಗಾದರೂ ನೋವಾಗಿರುವುದಾದರೆ ತಾನು ಅದಕ್ಕೆ ವಿಷಾದಿಸುವುದಾಗಿ ಕೂಡ ನಿನ್ನೆ ಖಾನ್ ಹೇಳಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲಾಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












