ಸನ್ಮಾರ್ಗ ವಾರ್ತೆ
ಪುರಿ,ಮೇ.9: ಒಡಿಶಾದ ಪುರಿಯ ಭಗವಾನ್ ಜಗನ್ನಾಥರ ರಥಯಾತ್ರೆಯನ್ನು ಕೈಗೊಳ್ಳಲು ಹಾಗೂ ರಥವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೇ ವೇಳೆ ಸಾಮಾಜಿಕ ಸಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ದೇವಸ್ಥಾನದ ಸಮಿತಿಗೆ ಸರಕಾರವು ಆಜ್ಞಾಪಿಸಿರುವುದಾಗಿ ತಿಳಿಸಲಾಗಿದೆ.
ಸರ್ಕಾರದ ಅನುಮೋದನೆಯೊಂದಿಗೆ ಪುರಿಯಲ್ಲಿ ರಥದ ನಿರ್ಮಾಣವೂ ಪ್ರಾರಂಭವಾಗಿದ್ದು, ಶುಕ್ರವಾರ ಬೆಳಿಗ್ಗೆ, ಕುಶಲಕರ್ಮಿಗಳು ಎಲ್ಲಾ ಮೂರು ರಥಗಳನ್ನು ತಯಾರಿಸುವ ವಿಧಾನವನ್ನು ಪ್ರಾರಂಭಿಸಿದ್ದಾರೆ.
ಜೂನ್ 23 ರಂದು ಪ್ರಾರಂಭವಾಗಲಿರುವ ರಥಯಾತ್ರೆಯಲ್ಲಿ ಹಾಗೂ ರಥ ನಿರ್ಮಾಣದಲ್ಲಿದ ಹಂತಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅನುಮತಿಯಲ್ಲಿ ಸ್ಪಷ್ಟಪಡಿಸಿದೆ. ರಥದ ನಿರ್ಮಾಣವೂ ಸಾಮಾನ್ಯ ಜನರು ಸೇರದ ಸ್ಥಳದಲ್ಲಾಗಿರಬೇಕು ಎಂದು ಅದು ತಿಳಿಸಿದೆ. ಇದುವರೆಗೆ, ದೇವಾಲಯದ ಮುಖ್ಯ ಮಾರ್ಗದ ಮುಂದೆ ರಥವನ್ನು ನಿರ್ಮಿಸಲಾಗುತ್ತಿತ್ತು.

ರಥಯಾತ್ರೆ ಬಗ್ಗೆ ಈ ಬಾರಿ ಸಾಕಷ್ಟು ಸಂಶಯಗಳಿವೆ. ಕೊರೋನಾ ವೈರಸ್ನಿಂದಾಗಿ ಮಾರ್ಚ್ 20 ರಿಂದ ಈ ದೇವಾಲಯವನ್ನು ಮುಚ್ಚಲಾಗಿದೆ. ಜಗನ್ನಾಥ ದೇವಾಲಯದ ರಥಯಾತ್ರೆ ಅತಿದೊಡ್ಡ ಹಬ್ಬವಾಗಿದೆ. ಈ ರಥಯಾತ್ರೆಯಲ್ಲಿ ದೇಶ ವಿದೇಶಗಳಿಂದ 10 ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ.ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಈ ವರ್ಷ ರಥಯಾತ್ರೆ ಬಹುಶಃ ರದ್ದಾಗಬಹುದು ಎಂದು ನಂಬಲಾಗಿತ್ತು. ಭಗವಾನ್ ಜಗನ್ನಾಥ್, ಬಲಭದ್ರ ಮತ್ತು ಸುಭದ್ರಾ ದೇವಿಯ ರಥಗಳು ಏಪ್ರಿಲ್ 26 ರಂದು ಅಕ್ಷಯ ತೃತೀಯಕ್ಕೆ ದೇವಾಲಯದಲ್ಲಿ ಸಿದ್ಧವಾಗಬೇಕಿತ್ತು ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೀಗ ಹಾಕಿದ ಕಾರಣ ಇದು ಸಾಧ್ಯವಾಗಿರಲಿಲ್ಲ.
ಈ ವಿಷಯದ ಬಗ್ಗೆ ಮೇ 4 ರಂದು ಸಭೆ ನಡೆಸಿದ ನಂತರ, ಶ್ರೀ ಜಗನ್ನಾಥ್ ದೇವಾಲಯ ನಿರ್ವಹಣಾ ಸಮಿತಿಯು ಪುರಿ ಜಿಲ್ಲೆಯು ಕೊರೋನಾದಿಂದ ಬಹುತೇಕ ಮುಕ್ತವಾಗಿದೆ ಮತ್ತು ಹಸಿರು ವಲಯದಲ್ಲಿದೆ ಎಂದಿದ್ದು, ರಥ ನಿರ್ಮಾಣಕ್ಕೆ ಹಾಗೂ ರಥಯಾತ್ರೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಿತ್ತು ತದನಂತರ ರಾಜ್ಯ ಸರ್ಕಾರವು ಅದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು.
ಕೃಪೆ: ದೈನಿಕ ಭಾಸ್ಕರ












