ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದ 82 ವಿದೇಶಿ ಪ್ರಜೆಗಳ ವಿರುದ್ಧ ಆರೋಪ ಪಟ್ಟಿ ದಾಖಲು

0
630

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.27: ಕಳೆದ ಮಾರ್ಚ್‌ನಲ್ಲಿ ದೆಹಲಿಯ ನಿಝಾಮುದ್ದೀನ್‍ನಲ್ಲಿ ನಡೆದಿದ್ದ ತಬ್ಲೀಗ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ 82 ವಿದೇಶಿ ಪ್ರಜೆಗಳ ವಿರುದ್ಧ ದೆಹಲಿ ಪೊಲೀಸರು 20 ಆರೋಪ ಪಟ್ಟಿ ದಾಖಲಿಸಿದ್ದು ವೀಸಾ ನಿಯಮಗಳು, ಭಾರತ ಸರಕಾರದ ಕೊರೋನ ಪ್ರತಿರೋಧ ಮಾರ್ಗಸೂಚಿ ಉಲ್ಲಂಘಿಸಿ ಸಮ್ಮೇಳನ ನಡೆಸಿದ ಆರೋಪವನ್ನು ಹೊರಿಸಲಾಗಿದೆ.

82 ಮಂದಿಯ ವೀಸಾವನ್ನು ಕೇಂದ್ರ ಸರಕಾರ ರದ್ದುಪಡಿಸಿತ್ತು. ಇವರನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಸಮ್ಮೇಳನಕ್ಕೆ ಬಂದಿದ್ದ ಹಲವರಿಗೆ ಕೊರೋನ ರೋಗ ತಗಲಿತ್ತು. ಸಾಕೇತ್ ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್‍ರ ಮುಂದೆ 15,499 ಪುಟಗಳ ಆರೋಪಪಟ್ಟಿಯನ್ನು ಕ್ರೈಂ ಬ್ರಾಂಚ್ ಸಲ್ಲಿಸಿದೆ.ಜೂನ್ 12ಕ್ಕೆ ಕೋರ್ಟು ಆರೋಪ ಪಟ್ಟಿ ಪರಿಶೀಲಿಸಲಿದೆ. ಅದರ ನಂತರ ಕ್ರಮ ಜರಗಲಿದೆ.

ಫಿಜಿ, ಸೌದಿ ಅರೇಬಿಯ, ಅಲ್ಜೀರಿಯ ಬ್ರೆಝಿಲ್, ಚೀನ, ಸುಡಾನ್, ಫಿಲಿಪ್ಪೀನ್ಸ್, ಅಮೆರಿಕ ಅಫ್ಘಾನಿಸ್ತಾನ, ಇಂಗ್ಲೆಂಡ್ ,ಆಸ್ಟ್ರೇಲಿಯ , ಕಝಕಿಸ್ತಾನ, ಮೊರೊಕ್ಕೊ, ಯುಕ್ರೇನ್, ಈಜಿಪ್ಟ್, ರಷ್ಯ, ಜೋರ್ಡಾನ್, ಫ್ರಾನ್ಸ್, ಟುನಿಷ್ಯ ಸಹಿತ 20 ದೇಶಗಳಿಂದ ಸಮ್ಮೇಳನದಲ್ಲಿ 82 ಮಂದಿ ಭಾಗವಹಿಸಿದ್ದರು.

ಲಾಕ್‌ಡೌನ್ ಉಲ್ಲಂಘನೆ, ವೈರಸ್ ಹರಡುವಿಕೆ, ಕ್ವಾರಂಟೈನ್ ನಿಯಮ ಉಲ್ಲಂಘನೆ ಇತ್ಯಾದಿ ಆರೋಪಗಳನ್ನು ಹೊರಿಸಿ ಕೇಸು ದಾಖಲಿಸಿಕೊಳ್ಳಲಾಗಿತ್ತು. ಸಮ್ಮೇಳನದಲ್ಲಿ 34 ದೇಶಗಳ 900 ತಬ್ಲೀಗ್ ಕಾರ್ಯಕರ್ತರು ಭಾಗವಹಿಸಿದ್ದು ಇವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದರು.