ಮನೆಗೆಲಸದಾಕೆಯ ಕೈಯಲ್ಲಿ ಸೋಂಕಿರಬಹುದು ಎಂದ ಕೆಂಟ್ ಆಟ್ಟಾ ಬ್ರೆಡ್ ಮೇಕರ್ ಜಾಹೀರಾತಿಗೆ ವ್ಯಾಪಕ ವಿರೋಧ; ಸಂಸ್ಥೆಯಿಂದ ಕ್ಷಮಾಯಾಚನೆ, ಬಿಜೆಪಿ ಶಾಸಕಿಯಿಂದ ಹೇಳಿಕೆ ಬಿಡುಗಡೆ

0
1068

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.28:ನಟಿ ಹಾಗೂ ಬಿಜೆಪಿ ಶಾಸಕಿ ಹೇಮಾ ಮಾಲಿನಿಯವರು ಆರೋಗ್ಯ ಉತ್ಪನ್ನಗಳ ಕಂಪನಿ ಕೆಂಟ್ ಆರೋ ಸಿಸ್ಟಮ್ಸ್‌ನ ವಿವಾದಾತ್ಮಕ ಜಾಹೀರಾತನ್ನು “ಸೂಕ್ತವಲ್ಲ” ಎಂದು ಕರೆದಿದ್ದಾರೆ ಮತ್ತು ಅದು ಅವರ ಮೌಲ್ಯಗಳೊಂದಿಗೆ ಪ್ರತಿಧ್ವನಿಸುವುದಿಲ್ಲ ಎಂದು ಹೇಳಿದ್ದು, “ನಾನು ಸಮಾಜದ ಎಲ್ಲಾ ವರ್ಗದವರನ್ನು ಗೌರವಿಸುತ್ತೇನೆ ಮತ್ತು ಎಲ್ಲರೊಂದಿಗೆ ನಿಲ್ಲುತ್ತೇನೆ” ಎಂದು ಅವರು ಹೇಳಿದರು. ಆಟ್ಟಾ ಮತ್ತು ಬ್ರೆಡ್ ಮೇಕರ್ ಜಾಹೀರಾತಿನ ನಂತರ ಸಾಮಾಜಿಕ ಮಾಧ್ಯಮದಲ್ಲಿ ವರ್ಗವ್ಯವಸ್ಥೆಗೆ ಆಧಾರಿತ ಜಾಹಿರಾತಿನ ವಿಷಯಕ್ಕಾಗಿ ಭಾರಿ ಟೀಕೆಗೆ ಗುರಿಯಾದ ಬೆನ್ನಿಗೆ ಅವರು ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಬ್ರಾಂಡ್ ಅಂಬಾಸಿಡರ್ ಹೇಮಾ ಮಾಲಿನಿ ಮತ್ತು ಅವರ ಮಗಳು ಇಶಾ ಡಿಯೋಲ್ ಒಳಗೊಂಡ ಜಾಹೀರಾತಿನಲ್ಲಿ, ಮನೆಕೆಲಸದವರನ್ನು ಕೊರೋನಾ ಸೋಂಕಿನ ವಾಹಕರಾಗಿ ಚಿತ್ರಿಸುವ ಮೂಲಕ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಟೀಕಾ ಪ್ರಹಾರಗಳು ಹರಿದಾಡಿದವು.

ನಿಮ್ಮ ಸೇವಕಿಗೆ ಆಟ್ಟಾ ಹಿಟ್ಟನ್ನು ಕೈಯಿಂದ ಬೆರೆಸಲು ನೀವು ಅನುಮತಿಸುತ್ತಿದ್ದೀರಾ? ಅವಳ ಕೈಗಳು ಸೋಂಕಿಗೆ ಒಳಗಾಗಬಹುದು, “ಕೆಂಟ್‌ನ ಅಟ್ಟಾ ಮತ್ತು ಬ್ರೆಡ್ ಮೇಕರ್ ಖರೀದಿಸಿ ಹಿಟ್ಟನ್ನು ಕೈ ಬಳಸದೇ ಬೆರೆಸುವುದನ್ನು ನಿಮ್ಮದಾಗಿಸಿಕೊಳ್ಳಿ” ಎಂದು ಉತ್ಪನ್ನ ಜಾಹೀರಾತು ಬಿಡುಗಡೆಗೊಂಡಿದೆ.

ಬ್ರ್ಯಾಂಡ್ ಅನ್ನು “ಕ್ಲಾಸಿಸ್ಟ್” ಎಂದು ಆರೋಪಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅನೇಕರಿಗೆ ಜಾಹೀರಾತು ಅರಗಿಸಿಕೊಳ್ಳದಂತಾಗಿದೆ “ವರ್ಗ ವ್ಯವಸ್ಥೆಯನ್ನು ಸಾರುವ ಹಾಗೆ, ಸೇವಕಿಯ ಕೈ ಮಾತ್ರ ಅಶುದ್ಧ ಎಂಬ ರೀತಿಯಲ್ಲಿ ಜಾಹೀರಾತು ಮನೆಕೆಲಸದ ಸೇವಕಿಯರನ್ನು ಅಪಮಾನಿಸುತ್ತಿದೆ” ಎಂದು ಒಬ್ಬರು ಟ್ವಿಟರ್ ಬಳಕೆದಾರರು ಕಿಡಿಕಾರಿದ್ದಾರೆ.

ಭಾರಿ ಹಿನ್ನಡೆಯನ್ನು ಎದುರಿಸಿದ ನಂತರ, ನೋಯ್ಡಾ ಮೂಲದ ಸಂಸ್ಥೆಯು ಜಾಹೀರಾತನ್ನು ಕೆಳಗಿಳಿಸಿ ನಿನ್ನೆ ಮಧ್ಯಾಹ್ನ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.

“ಕೆಂಟ್ ಅಟ್ಟಾ ಮತ್ತು ಬ್ರೆಡ್ ಮೇಕರ್‌ನ ಜಾಹೀರಾತನ್ನು ಪ್ರಕಟಿಸಿದ್ದಕ್ಕಾಗಿ ದಯವಿಟ್ಟು ನಮ್ಮ ಪ್ರಾಮಾಣಿಕ ಕ್ಷಮೆಯಾಚನೆಯನ್ನು ಸ್ವೀಕರಿಸಿ. ಇದು ಉದ್ದೇಶಪೂರ್ವಕವಾಗಿಯಲ್ಲ ಬದಲಾಗಿ ತಪ್ಪಾದ ಸಂದೇಶವನ್ನು ನೀಡಿದ್ದರಿಂದ ಈ ಜಾಹೀರಾತನ್ನು ಸಂಸ್ಥೆಯು ಹಿಂಪಡೆದಿದೆ” ಎಂದು ಕಂಪೆನಿಯ ಅಧ್ಯಕ್ಷ ಮಹೇಶ್ ಗುಪ್ತಾ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಕೊರೋನ ವೈರಸ್-ಪ್ರೇರಿತ ಲಾಕ್‌ಡೌನ್ ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಭಯವು ದೇಶಾದ್ಯಂತ ಅನೇಕ ಮನೆಕೆಲಸ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿರುವ ಸಮಯದಲ್ಲಿ ಈ ಜಾಹೀರಾತು ಬಿಡುಗಡೆಗೊಂಡಿತ್ತು.

ಆರೋ ವಾಟರ್ ಪ್ಯೂರಿಫೈಯರ್ ವಿಭಾಗದಲ್ಲಿ ಕೆಂಟ್ ಪ್ರಖ್ಯಾತಿ ಪಡೆದಿದೆ‌. ಏರ್ ಪ್ಯೂರ್ ಫೈಯರ್ ಗಳು, ನೀರು ಮೆದುಗೊಳಿಸುವಿಕೆಗಳು, ಅಡುಗೆ ವಸ್ತುಗಳು ಮತ್ತು ವ್ಯಾಕ್ಯೂಮ್ ಕ್ಲೀನರ್ ಗಳಂತಹ ಹಲವಾರು ಉತ್ಪನ್ನ ವಿಭಾಗಗಳಿಗೆ ಕೆಂಟ್ ವಿಸ್ತರಿಸಲ್ಪಟ್ಟಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.