ಬೇರೆ ಧರ್ಮದ ಹೆಗಲ ಮೇಲೆ ಕೋವಿ ಇಟ್ಟು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಸರಿಯೇ?

0
943

ಸನ್ಮಾರ್ಗ ವಾರ್ತೆ

ಲೇಖಕರು: ಇದ್ರೀಸ್ ಹೂಡೆ

ಆರಾಧನೆಗೆ ಅವಕಾಶ ನೀಡುವುದರ ಪರಿಣಾಮದ ಬಗ್ಗೆ ವಿರೋಧಿಗಳ ಒತ್ತಡಗಳಿಂದ ಪ್ರೇರಿತ ಅತಿಯಾದ ರಕ್ಷಣಾತ್ಮಕ ನಿಲುವೂ ಬೇಡ, ಆದರೆ…ರೋಗ ತಡೆಯುವ ರಕ್ಷಣಾ ವಿಧಿಗಳ ಪಾಲನೆ ಮತ್ತು ನೈರ್ಮಲ್ಯಕ್ಕೆ ಅತಿಯಾದ ಮಹತ್ವ ಇರಲಿ; ನೈರ್ಮಲ್ಯ ಪಾಲಿಸದೇ ಇರುವವರ ಬಗ್ಗೆ ‘Zero Tolerance'(ನಿರ್ದಾಕ್ಷಿಣ್ಯ ಕ್ರಮ) ಅಗತ್ಯವಾಗಿ ಇರಲೇಬೇಕು.

ಮಸೀದಿಗಳನ್ನು ಆರಾಧನೆಗಾಗಿ ಮುಕ್ತಗೊಳಿಸುವ ಕುರಿತು ಕೆಲವು ಆಶಂಕೆಗಳಿಂದ ಕೂಡಿದ ಒತ್ತಡಗಳಿಂದ ಪ್ರೇರಿತ “ಸಿದ್ದ” ಮಾನಸಿಕತೆಯ ಪರಿಣಾಮದಿಂದಾಗಿ ಹಿಂಜರಿಕೆ ತೋರುವುದು ಸರಿಯಲ್ಲ. ಇದು ಕೇವಲ ದೇವಾಲಯಗಳಲ್ಲಿ ಹಿಂದುಗಳಿಗೆ ಆರಾಧನೆಗೆ ಅವಕಾಶ ನೀಡುತ್ತಾರೆ ಎಂಬ ಕಾರಣಕ್ಕೆ ನಮಗೂ ನೀಡಬೇಕು ಎಂಬ ಸ್ಪರ್ಧಾತ್ಮಕವಾಗಿ ಅಥವಾ ಅಭಿಮಾನದ ಪ್ರಶ್ನೆಯಾಗಿ ನಮ್ಮ ಬೇಡಿಕೆಯಾಗಿರದೆ. ಬೇರೆ ಧರ್ಮದ ಹೆಗಲ ಮೇಲೆ ಕೋವಿ ಇಟ್ಟು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ಬದಲಾಗಿ ಇದು ನಮ್ಮ ಬೇಡಿಕೆಯಾಗಿ ಮುಂದೆ ಬರಬೇಕು.

ಏಕೆಂದರೆ.., ಯಾವುದೇ ಒಂದು ಧಾರ್ಮಿಕ ಕಡ್ಡಾಯ ಕರ್ಮವನ್ನು ಕಾಯಿಲೆಯ “ಶಂಕಾಸ್ಪದ ತೀವ್ರತೆ” ಆಧಾರದಲ್ಲಿ ದೀರ್ಘಕಾಲ ಅಮಾನತ್ತಿನಲ್ಲಿಡುವುದು ಸರಿಯಲ್ಲ. ವಿಶ್ವದ ಅನೇಕ ಆರೋಗ್ಯ ಸಂಸ್ಥೆಗಳು ಹಾಗೂ ತಜ್ಞರ ಅಭಿಪ್ರಾಯದಂತೆ ಕೊರೋನ ದೀರ್ಘಕಾಲ ಉಳಿದುಕೊಳ್ಳಬಹುದು, ಜನರು ಈ ರೋಗದೊಂದಿಗೆ ಬದುಕುವುದು ಕಲಿತುಕೊಳ್ಳಬೇಕು. ಇತರ ಕಾಯಿಲೆಗಳನ್ನು ನಾವು ಸಾಮಾನ್ಯವಾಗಿ ಹೇಗೆ ಜೀವನದಲ್ಲಿ ನಿಭಾಯಿಸಿಕೊಂಡು ಅದರೊಂದಿಗೆ ಜೀವಸುತ್ತೇವೆಯೋ ಅದೇ ರೀತಿ ನಿಭಾಯಿಸಿ ಜೀವಿಸಬೇಕಾಗಿದೆ. ಖಂಡಿತ ಈ ಕಾಯಿಲೆಯ ಸಾಂಕ್ರಾಮಿಕತೆ (ಒಬ್ಬರಿಂದ ಇನ್ನೊಬ್ಬರಿಗೆ ಹರಡುವಿಕೆ) ತೀವ್ರವಾಗಿದೆ.

ಆದರೆ.. ಅಷ್ಟು ದೊಡ್ಡ ಮಾರಣಾಂತಿಕ ಕಾಯಿಲೆಯಲ್ಲ. ಸಾಂಕ್ರಾಮಿಕತೆಯಿಂದ ಬಚಾವಾಗಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವದ ಪರಿಗಣಿತ ಸಾಂಕ್ರಾಮಿಕ ಆರೋಗ್ಯ ತಜ್ಞರು ( World Recognized Epidemiologists) ಸೂಚಿಸಿದ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿಯೇ ನಮ್ಮ ಎಲ್ಲಾ ದೈನಂದಿನ ಆರ್ಥಿಕ, ಜೀವನೋಪಾಯದ, ಶೈಕ್ಷಣಿಕ, ಧಾರ್ಮಿಕ, ಕೌಂಟುಬಿಕ, ರಾಜಕೀಯ, ಸಾಮಾಜಿಕ ಇನ್ನಿತರ ಅಗತ್ಯ ಸಾಮೂಹಿಕ ವ್ಯವಹಾರಗಳನ್ನು ನಡೆಸಬೇಕಾಗಿದೆ.

ಇನ್ನೂ ನಮಾಝ್ ಬಗ್ಗೆ ಹೇಳುದಾದರೆ ಇಲ್ಲಿ ದೈಹಿಕ ಅಂತರ ಕಾಯ್ದುಕೊಂಡೇ ಅದನ್ನು ನಿರ್ವಹಿಸುವುದು, ಒಂದು ಹಂತದವರೆಗೆ ನಮಾಝ್’ನಲ್ಲಿ ಅದು ಸ್ವಯಂ ಒಳಗೊಂಡಿದೆ. ಒಬ್ಬ ನಮಾಝ್ ನಿರ್ವಹಿಸಲು ಕನಿಷ್ಠ 6ಚದರ ಅಡಿಗಳ ಸ್ಥಳಾವಕಾಶಬೇಕು. ಕೊರೋನದ ಸಂದರ್ಭದಲ್ಲಿ ಅಗತ್ಯವೆನಿಸಿದರೆ ಸಫ್(ಸಾಲುಗಳು)ಗಳಲ್ಲಿ ಒಬ್ಬರಿಂದ ಇನ್ನೊಬ್ಬರ ಮಧ್ಯೆ ಸಲ್ಪ ಹೆಚ್ಚು ಅಂತರವನ್ನು ಕಾಯ್ದುಕೊಳ್ಳಬಹುದು.

ಇಸ್ಲಾಮಿನಲ್ಲಿ ನೈರ್ಮಲ್ಯಕ್ಕೆ ಅತಿಯಾದ ಮಹತ್ವ ನೀಡಲಾಗಿದೆ. ನಮಾಝ್ ನಿರ್ವಹಿಸಲು ಅಂಗಸ್ನಾನ(ವಝು) ಕಡ್ಡಾಯ. ಆದ್ದರಿಂದ ನೈರ್ಮಲ್ಯವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿಸಲು ವಝೂ ಮಾಡುವ ಸಂದರ್ಭದಲ್ಲಿ ಕೈ ಕಾಲುಗಳನ್ನು ಸಾಬೂನಿನಿಂದ ತೊಳೆಯಲು ಮಸೀದಿ ಆಡಳಿತ ಮಂಡಳಿಯಿಂದ ಸಬೂನು ಅಥವಾ ದ್ರವ ಸಾಬೂನು ಒದಗಿಸಿ ಅದನ್ನು ಅಗತ್ಯವಾಗಿ ಬಳಸಿಕೊಳ್ಳುವಂತೆ ಮಾಡಬೇಕು. ಹಾಗೆಯೇ ಸರಕಾರ ಸೂಚಿಸಿದಂತೆ ಮಾಸ್ಕ್ ಧರಿಸುವಿಕೆಯನ್ನು ಮಸೀದಿ ಒಳಾಂಗಣದಲ್ಲಿಯೂ ಮುಂದುವರಿಸಬಹುದು. ಮಸೀದಿ ಇತರ ಧಾರ್ಮಿಕ ಆರಾಧನೆಯಲ್ಲಿರುವಂತೆ ಇಲ್ಲಿ ಜನಜಂಗುಳಿ ಸೇರಿ ಮಾಡುವ ಆರಾಧನೆಯಲ್ಲ ಹಾಗೆಯೇ ತೀರ್ಥ ಪ್ರಸಾದಗಳ ಪೂರೈಕೆಯು ಇಲ್ಲಿಲ್ಲ( ಇದನ್ನು ತುಲನಾತ್ಮಕವಾಗಿ ಹೇಳುತ್ತಿದ್ದೇನೆಯೇ ಹೊರತು ಇತರ ಧರ್ಮಗಳ ಆಚರಣೆಗಳ ಬಗ್ಗೆ ನಕಾರಾತ್ಮಕ ದೃಷ್ಟಿಯಿಂದ ಅಲ್ಲ).

ತಾರ್ಕಿಕವಾಗಿ ಹೇಳುದಾದರೆ, ಸರಕಾರ ಅನುಮತಿಸಿದ ಪೇಟೆಯಲ್ಲಿ ದಿನಸಿ ಅಂಗಡಿ, ಮಧ್ಯದಂಗಡಿ, ನಿರ್ಮಾಣ ಕಾಮಗಾರಿ, ಮಾಧ್ಯಮ, ಸರಕಾರಿ ಕಛೇರಿಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ದೈಹಿಕ ಅಂತರ ಮತ್ತು ನೈರ್ಮಲ್ಯ ಕಾಪಾಡುವುದಕ್ಕಿಂತ ಮಸೀದಿಗಳಲ್ಲಿ ಇದನ್ನು ಪಾಲಿಸುವುದು ಸುಲಭ. ಅಷ್ಟೇ ಅಲ್ಲದೆ ಒಂದು ಹಂತದವರೆಗೆ ಹಿಂದಿನಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಕರೋನದಿಂದಾದ ಮರಣದ ದರ 2.78 ಇದರಲ್ಲಿ ಮಧುಮೇಹ, ರಕ್ತದಒತ್ತಡ, ಇನ್ನಿತರ ಕಾಯಿಲೆಯನ್ನು ಒಳಗೊಂಡ ಹಿರಿಯರೇ ಹೆಚ್ಚು. ಅಲ್ಲದೆ “ಆರೋಗ್ಯ ವ್ಯವಸ್ಥೆ ಪ್ರಭಲವಾಗಿರುವ” ದಕ್ಷಿಣ ಕೋರಿಯಾ, ತೈವಾನ್, ಜಪಾನ್’ನಂತಹ ಪೂರ್ವ ಏಷ್ಯಾದ ರಾಷ್ಟ್ರಗಳು ಯಾವುದೇ ಲಾಕ್’ಡೌನ್ ಇಲ್ಲದೆ ಕೊರೋನವನ್ನು ನಿಭಾಯಿಸಿದೆ. ಅದರಲ್ಲೂ ಆರೋಗ್ಯ ವ್ಯವಸ್ಥೆ ಅತ್ಯುತ್ತಮವಿರುವ ದಕ್ಷಿಣ ಕೋರಿಯದಲ್ಲಿ ಕರೋನದ ಮರಣ ದರ 1.1 ಎಂಬುದು ನೆನಪಿರಲಿ. ಇದೊಂದು ಗುಣಪಡಿಸಬಹುದಾದ ಕಾಯಿಲೆ ಅಸಾಮಾನ್ಯವಾದುದೇನು ಅಲ್ಲ.

ಆದರೆ ಒಂದು ರೀತಿಯ ಭಯಂಕರವಾಗಿ ಜನಜೀವನ ಸ್ಥಬ್ದಗೊಳಿಸುವ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಇದರ ಹಿಂದೇನಿದೆ ತಿಳಿದುಕೊಳ್ಳಲು ಕಾಲಾವಕಾಶದ ಅಗತ್ಯವಿದೆ. ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದರ ಫಲಾನುಭವಿಗಳು ಖಂಡಿತಾ ಅನಾವರಣಗೊಳ್ಳಲಿದ್ದಾರೆ. ಒಂದು ರೀತಿಯಲ್ಲಿ ಕರೋನ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಸರಕಾರಕ್ಕೆ ಪಂಥಾಹ್ವಾನ(Challenge) ನೀಡಿದಂತಾಗಿದೆ.

ಇದನ್ನು ನಮ್ಮದೇ ದೇಶದ ಒಂದು ಸಣ್ಣ ರಾಜ್ಯದ ಉದಾಹರಣೆಯಾಗಿ ಕೇರಳವನ್ನು ತೆಗೆದುಕೊಳ್ಳಬಹುದು. ಕೇರಳದ ಪರಿಣಾಮಕಾರಿ ಆರೋಗ್ಯ ವ್ಯವಸ್ಥೆಯಿಂದಾಗಿ ಆದಷ್ಟು ಬೇಗ ಕೊರೋನ ಹರಡುವಿಕೆಯು ಮೇಲೆ ನಿಯಂತ್ರಣ ಸಾಧಿಸಿತು. ನಿಜಾವಾದ ವಿಚಾರವೇನೆಂದರೆ ಸರಕಾರ ತನ್ನ ವೈಫಲ್ಯವನ್ನು ಜನತೆಯ ಮೇಲೆ ಹೇರುತ್ತಿದೆ.

ಆದ್ದರಿಂದ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ತಡೆಯುವಂತಹ ಯಾವ ಕಾರಣವೂ ಇಲ್ಲ. ಸಮುದಾಯ ಈಗಾಗಲೇ ಸರಕಾರದ ಆದೇಶವನ್ನು ಪರಿಗಣಿಸಿ ಒಂದು ದೊಡ್ಡ ಅವಧಿಗೆ ಅಭೂತಪೂರ್ವ ಎಂಬಂತೆ ಅದನ್ನು ಪಾಲಿಸಿದೆ. ಸರಕಾರ ಈ ನಿರ್ಬಂಧವನ್ನು ಮುಂದುವರಿಸಬಾರದು.
ನಮಾಝ್ ನಿರ್ವಹಿಸಲು ಮಾತ್ರವಲ್ಲ ನಮಾಝ್ ಸಂಸ್ಥಾಪಿಸಲು ಆದೇಶಿಸಲಾಗಿದೆ ಎಂಬುದನ್ನು ಮರೆಯದಿರೋಣ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್‌ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.