ಗಲ್ಫ್ ರಾಷ್ಟ್ರಗಳಲ್ಲಿನ ಅನಿವಾಸಿಗಳನ್ನು ತಾಯ್ನಾಡಿಗೆ ಕರೆತರುವಲ್ಲಿ, ಎ.ಪಿ.ಕಾಂತಪುರಂರವರ ಮಾನವೀಯ ಸೇವೆ ಶ್ಲಾಘನೀಯ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

0
807

ಸನ್ಮಾರ್ಗ ವಾರ್ತೆ

ಮಂಗಳೂರು,ಜೂ.6: ಕಳೆದ ಮಾರ್ಚ್ 22 ರ ಲಾಕ್‌ಡೌನ್ ಘೋಷಣೆಯ ಬಳಿಕ ಅಂತಾರಾಷ್ಟ್ರೀಯ ವಿಮಾನ ಯಾನಗಳು ರದ್ದುಗೊಂಡು ಎರಡುವರೆ ತಿಂಗಳುಗಳಿಗಿಂತ ಮಿಗಿಲಾಗಿ ತಮ್ಮ ಊರಿಗೆ ಮರಳುವ ಬಯಕೆಯಲ್ಲಿದ್ದ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಅದರಲ್ಲೂ, ಸಂದರ್ಶನ ವಿಸಾ ಇತ್ಯಾದಿಗಳಲ್ಲಿ ತೆರಳಿ ಉದ್ಯೋಗ ಹುಡುಕಾಟದ ಮಧ್ಯೆ ಲಾಕ್‌ಡೌನ್ ಜಾರಿಯಾಗಿ, ಅತ್ತ ಕೆಲಸವೂ ಸಿಗದೆ ಆರ್ಥಿಕ ಸಂಕಷ್ಟದಲ್ಲಿ ಊರಿಗೂ ಬರಲಾಗದ ಪರಿಸ್ಥಿತಿಯಲ್ಲಿ ಸಂಕಟ ಪಡುವವರಿಗೆ ಆಶಾಕಿರಣವಾದ, ಬಹುಮಾನ್ಯರಾದ, ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (ಕಾಂತಪುರಂ ಉಸ್ತಾದ್)ರವರ ನೇತೃತ್ವದಲ್ಲಿನ ತಂಡವು ಕೇವಲ ಮಾನವೀಯ ಹಿತದೃಷ್ಟಿಯಿಂದ ಕೂಡಿದ ಅಮೋಘ ಸೇವೆಯ ಮೂಲಕ ಬಹಳಷ್ಟು ಜನರನ್ನು ಉಚಿತವಾಗಿ ಊರಿಗೆ ಕರೆ ತರುವ ಯೋಜನೆಯನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಬಹಳ ಶ್ಲಾಘನೀಯವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಕ್ತಕಂಠದಿಂದ ಕೊಂಡಾಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ.ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು, ಕೆಲವಾರು ಸಂಘಟಕರು ಕೊಲ್ಲಿ ದೇಶಗಳಲ್ಲಿ ಬಾಕಿ ಉಳಿದಿರುವ ಜನರನ್ನು ಬಾಡಿಗೆ ವಿಮಾನಗಳ ಮೂಲಕ ಊರಿಗೆ ಕರೆತರುವ ಶ್ರಮಗಳನ್ನು ಆಯೋಜಿಸಿರುವರಾದರೂ, ಕಾಂತಪುರಂ ಉಸ್ತಾದ್‌ರವರು ಮಾಡಿರುವ ಜನಪರಸೇವೆಯು ಇವೆಲ್ಲವುಗಳನ್ನೂ ಹಿಮ್ಮೆಟ್ಟಿಸಿದ ವ್ಯತ್ಯಸ್ಥತೆಯನ್ನು ಹೊಂದಿದೆ ಯಾಕೆಂದರೆ, ಇದು ಆರ್ಥಿಕವಾಗಿ ಹಿಂದುಳಿದ ಜನರ ಮೇಲೆ ಯಾವುದೇ ಜಾತಿ, ಮತ ಭೇದವಿಲ್ಲದೇ ಕರುಣೆ ತೋರಿದೆ. ಕೇವಲ ಆರ್ಥಿಕ ಸಂಕಷ್ಟತೆಯನ್ನು ಹೊಂದಿದ ಅರ್ಹತೆಯನ್ನು ಮಾನದಂಡವಾಗಿಸಿ, ಆದರ ಆಧಾರದಲ್ಲಿ ಅಷ್ಟೊಂದು ಜನರನ್ನೂ ಉಚಿತವಾಗಿ ಊರಿಗೆ ಕರೆತರುವ ಮಹತ್ತರವಾದ ಸಾಧನೆಯನ್ನು ಮಾಡಿರುವ ಅವರನ್ನು ನಮ್ಮ ಪಕ್ಷವು ಅಭಿನಂದಿಸುತ್ತದೆ ಎಂದು ಅವರು ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.