ಸನ್ಮಾರ್ಗ ವಾರ್ತೆ
ಮಂಗಳೂರು,ಜು.29: ದ.ಕನ್ನಡ ಜಿಲ್ಲಾಧಿಕಾರಿಯವರನ್ನು, ತಕ್ಷಣ ವರ್ಗಾವಣೆಗೊಳಿಸಿದ ಸರಕಾರದ ಏಕಪಕ್ಷೀಯ ಕ್ರಮ ಖಂಡನಾರ್ಹವಾಗಿದೆ. ಕೋವಿಡ್ ನಿಯಂತ್ರಣಕ್ಕೆ ತರುವ ಯೋಜನೆ ಮತ್ತು ವಿಷಯಗಳಲ್ಲಿ ಜಿಲ್ಲಾಡಳಿತ ಒಂದಿಷ್ಟು ಎಡವಿಕೊಂಡು, ಆರಂಭದಿಂದಲೇ ವೈಫಲ್ಯವನ್ನು ಕಂಡರೂ, ತನ್ನ ಕೊರತೆಯಲ್ಲಿನ ಸೂಕ್ಷ್ಮ ವಿಚಾರಗಳಲ್ಲಿ ಮನವರಿಕೆ ಮಾಡಿಕೊಳ್ಳುವ ಜತೆಗೆ ವೈರಸ್ ಹೆಚ್ಚು ಹರಡುವ ಸಾಧ್ಯತೆಯನ್ನು ತಡೆಗಟ್ಟುವ ಇತ್ಯಾದಿಗಳಲ್ಲಿ ಇನ್ನೇನು ಚುರುಕನ್ನು ನೀಡುತ್ತಿದೆ ಎನ್ನುವಾಗಲೇ, ಅದಾವುದೋ ಬಾಹ್ಯಪ್ರೇರಿತ ಹಿತಾಸಕ್ತಿಗಳಿಗೆ ಮಣಿದಂತೆ ತೋಚುವ ರೀತಿಯಲ್ಲಿ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಯವರಿಗೆ ವರ್ಗಾವಣೆಯ ಆದೇಶ ಹೊರಡಿಸಿರುವುದು ವಿಷಾದಕರವೆಂದು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಇನ್ನು ಹೊಸದಾಗಿ ಅಧಿಕಾರ ಸ್ವೀಕರಿಸುವ ಜಿಲ್ಲಾಧಿಕಾರಿಯವರಿಗೆ ಪರಿಸ್ಥಿತಿಯ ಅವಲೋಕನವು ಮುಗಿಸಲು ಸಮಯದ ಅಗತ್ಯತೆ ಬೇಕಾಗಿರಬಹುದಾದ ಕಾರಣ ಇಷ್ಟೊಂದು ಸೂಕ್ಷ್ಮ ಸಂಧರ್ಭದಲ್ಲಿ ವರ್ಗಾವಣೆಯ ಆದೇಶ ತೀರಾ ಬಾಲಿಶತನದಿಂದ ಕೂಡಿದ್ದು ಸರಕಾರವು ಯಾವ ಖಾಸಗಿ ಲಾಭಿಗಳ ಒತ್ತಾಸೆಗೆ ಬಲಿಯಾಗಿದೆ ಎಂಬ ಜಿಜ್ಞಾಸೆಯನ್ನುಂಟು ಮಾಡಿದೆ. ಇದರ ಆದೇಶ ವಾರಕ್ಕೆ ಮೊದಲೇ ನಿರ್ಧರಿತವಾಗಿತ್ತೆಂದು ಹೇಳಲಾಗುತ್ತಿದ್ದರೂ, ಜಾನುವಾರು ಮಾರಾಟ ಮತ್ತು ಸಾಗಣೆಗಾರರ ಮೇಲೆ ಪುಂಡರು ಮಾಡುತ್ತಿರುವ ಅಮಾನವೀಯ ಹಲ್ಲೆಗೆದುರಾಗಿ ಮಾನ್ಯ ಜಿಲ್ಲಾಧಿಕಾರಿಯವರು ಸಂಧರ್ಭೋಚಿತ ಎಚ್ಚರಿಕೆ ನೀಡಿದ ಈ ಬಕ್ರೀದ್ ಸಂಧರ್ಭದಲ್ಲಿಯೇ ಆದೇಶವನ್ನು ಜಾರಿ ಮಾಡಿರುವುದು ಪ್ರಶ್ನಾರ್ಹವಾಗಿದ್ದು, ಸರ್ಕಾರದ ನೀತಿಯನ್ನು ಮತ್ತು ಆದರ ನಡೆಯನ್ನರಿತ ಯಾರಿಗೂ ಇದನ್ನು ಕೇವಲ ಕಾಕತಾಳಿಯವಾಗಿ ಕಾಣಲಾಗದು ಎಂದವರು ಹೇಳಿದರು.
ಅದೇ ರೀತಿ ನೂತನ ಜಿಲ್ಲಾಧಿಕಾರಿಯವರಿಗೆ ಕೋವಿಡನ್ನು ಮತ್ತು ನೈತಿಕಪೋಲಿಸ್ ಗಿರಿ ನಡೆಸುವವರನ್ನು ನಿಯಂತ್ರಿಸಲು ಜನಪ್ರತಿನಿಧಿಗಳು ಅಡ್ಡಿಯಾಗಬಾರದು ಮಾತ್ರವಲ್ಲ ನೂತನ ಜಿಲ್ಲಾಧಿಕಾರಿಯವರು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಜವಾಬ್ದಾರಿ ನಿಭಾಯಿಸುವರು ಎಂದು ಆಶಿಸೋಣ ಎಂದು ಅವರು ತಿಳಿಸಿದರು.
ಓದುಗರೇ, ಸನ್ಮಾರ್ಗ ಪೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












