ಸನ್ಮಾರ್ಗ ವಾರ್ತೆ
ಮೈಸೂರು: ಪ್ರವಾದಿ ಮುಹಮ್ಮದ್‌ರವರು(ಸ) ಮಧ್ಯಪ್ರಾಚ್ಯದ ಮಕ್ಕಾದಲ್ಲಿ ಜನಿಸಿ ಅತ್ಯಂತ ಅರಾಜಕತೆ ಮತ್ತು ಶೋಷಣಾ ಪ್ರವೃತ್ತಿಗಳಿಗೆ ಗುರಿಯಾಗಿದ್ದಂತಹ ಸಮಾಜವನ್ನು ಮಾನವೀಯತೆ ಮತ್ತು ಸಮಾನತೆಯ ಕಡೆಗೆ ಮುನ್ನಡೆಸಿದರು ಎಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಪ್ರಗತಿಪರ ಚಿಂತಕಾದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಹೇಳಿದರು
ಅವರು, ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವತಿಯಿಂದ ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಅರ್ಫಾತ್ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪ್ರವಾದಿ ಮುಹಮ್ಮದ್(ಸ)ರವರು ಗುಲಾಮಗಿರಿ ಮತ್ತು ದಬ್ಬಾಳಿಕೆಯ ಪ್ರವೃತ್ತಿಗಳಿಂದ ಮನುಕುಲವನ್ನು ಪಾರು ಮಾಡಿ ಬಿಡುಗಡೆಗೆ ನಾಂದಿ ಹಾಡಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು. ಲಿಂಗ ಸಮಾನತೆ ಮತ್ತು ಸ್ವಾತಂತ್ರ್ಯ ಗಳಿಗಾಗಿ ಇಸ್ಲಾಂ ಧರ್ಮದಲ್ಲಿ ವಿಶೇಷ ಮಹತ್ವ ನೀಡಿದೆ. ಯುವಕರ ಸಬಲೀಕರಣಕ್ಕೆ ಪ್ರವಾದಿ(ಸ)ಯವರು ವಿಶೇಷ ಮಹತ್ವ ನೀಡಿದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮಾತನಾಡಿ, ಕೋಮುವಾದಿಗಳು ಮತ್ತು ಭಯೋತ್ಪಾದಕರು ನಿಜವಾದ ಮುಸಲ್ಮಾನರಾಗಿರಲು ಸಾಧ್ಯವಿಲ್ಲ, ಕೊಲೆ, ಸುಲಿಗೆ ಮತ್ತು ಭಯೋತ್ಪಾದನೆಗೆ ಇಸ್ಲಾಂ ಧರ್ಮದಲ್ಲಿ ಯಾವುದೇ ಮಹತ್ವ ಇಲ್ಲ ಎಂದು ಹೇಳಿದರು.
ಮುಸಲ್ಮಾನರು ವಿಶೇಷವಾಗಿ ಶಾಂತಿ ಧೂತರಾಗಿ ಮಾನವ ಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಪ್ರವಾದಿ ಮುಹಮ್ಮದ್‌ರ(ಸ) ಶ್ರೇಷ್ಠ ಪರಂಪರೆಯನ್ನು ಮುಂದುವರಿಸಬೇಕು ಎಂದರು.
ವಿಧವೆಯರನ್ನು ಅನಾಥರಾಗಿಸದೆ ಅವರಿಗೆ ಹೊಸ ಬಾಳು ನೀಡುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯಬೇಕು ತಾಯಿ-ತಂದೆ ಮತ್ತು ಗುರು ಹಿರಿಯರ ಪ್ರೀತಿ ಮತ್ತು ಸೇವೆಯ ಋಣವನ್ನು ಜೀವಿತಾವಧಿಯಲ್ಲೇ ತೀರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾದ ಮೌಲಾನ ಮುಫ್ತಿ ಸೈಯದ್ ತಾಜುದ್ದೀನ್ ಸಾಹೇಬ್, ಅಸಾದುಲ್ಲಾ, ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.












