ಅವರನ್ನು ಹಿಂದೂ-ಮುಸ್ಲಿಂ ಆಗಿ ನೋಡ್ಬೇಡಿ: ಪ್ರಿಯಾಂಕಾ, ಅನ್ಸಾರಿಯೊಂದಿಗೆ ಬದುಕಲಿ- ಅಲಹಾಬಾದ್ ಹೈಕೋರ್ಟು

0
687

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.25: ಉತ್ತರ ಪ್ರದೇಶದ ‘ಲವ್‍ ಜಿಹಾದ್’ ಕಾನೂನು ನಿರ್ಮಾಣಕ್ಕೆ ಕಾರಣವಾದ ವಿವಾದಿತ ಏಕ ಸದಸ್ಯ ಪೀಠದ ತೀರ್ಪನ್ನು ಅಲಹಾಬಾದ್ ಹೈಕೋರ್ಟಿನ ವಿಭಾಗೀಯ ಪೀಠ ತಿದ್ದುಪಡಿಗೊಳಪಡಿಸಿ ತೀರ್ಪು ನೀಡಿದೆ. ಒಟ್ಟಿಗೆ ಬದುಕಲು ತೀರ್ಮಾನಿಸಿದ ಪ್ರಾಪ್ತ ವಯಸ್ಕರಾದ ಹಿಂದೂ ಮುಸ್ಲಿಮರ ಸಂಬಂಧವನ್ನು ಸರಕಾರಕ್ಕೂ ಕುಟುಂಬಕ್ಕೂ ಕಾನೂನಿನ ಮೂಲಕ ವಿರೋಧಿಸಲು ಸಾಧ್ಯವಿಲ್ಲ ಎಂದು ಜಸ್ಟಿಸ್ ಪಂಕಜ್ ನಖ್ವಿ, ವಿವೇಕ್ ಅಗರ್ವಾಲ್‍ರ ಪೀಠ ಹೇಳಿತು. ಇದಕ್ಕೆ ಸಮಾನ ಪ್ರಕರಣದಲ್ಲಿ ಏಕ ಸದಸ್ಯ ಪೀಠದ ವಿಧಿ ಸರಿಯಲ್ಲ ಎಂದು ವಿಭಾಗೀಯ ಪೀಠ ಹೇಳಿದ್ದು ಸಲಾಮತ್ ಅನ್ಸಾರಿ ಮತ್ತು ಪ್ರಿಯಾಂಕಾ ಖರ್‍ವರೆಯವರನ್ನು ಬದುಕಲು ಬಿಡಬೇಕೆಂದು ತೀರ್ಪು ನೀಡಿದೆ.

ಪ್ರಿಯಾಂಕಾ ಖರ್‍ವರೆ, ಸಲಾಮತ್ ಅನ್ಸಾರಿಯನ್ನು ಹಿಂದೂ ಮುಸ್ಲಿಂ ಆಗಿ ನೋಡಬಾರದು. ವಯಸ್ಕರಾದ ಇಬ್ಬರು ವ್ಯಕ್ತಿಗಳೆಂದು ನೋಡಬೇಕೆಂದು ಪೀಠ ಹೇಳಿತು. ಅವರಿಗೆ ಅವರದಾದ ಇಷ್ಟ, ಆಯ್ಕೆಗಳಿಗೆ ಸ್ವಾತಂತ್ರ್ಯ ಇದೆ. ಒಂದು ವರ್ಷದಿಂದ ಅವರು ಶಾಂತಿ, ಸಂತೋಷದಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನ, ಸ್ವಾತಂತ್ರ್ಯವನ್ನು ಸಂವಿಧಾನದ 21ನೇ ಪರಿಚ್ಛೇದ ದೃಢಪಡಿಸಿದೆ.

ಅವನು ಮತ್ತು ಅವಳು ಅವರಿಗೆ ಇಷ್ಟವಿರುವ ವ್ಯಕ್ತಿಯ ಜೊತೆ ಜೀವಿಸುವ ಹಕ್ಕು ಇದರಲ್ಲಿದೆ. ಅದಕ್ಕೆ ಹಸ್ತಕ್ಷೇಪವೆಂದರೆ ಎರಡು ವ್ಯಕ್ತಿಗಳ ವ್ಯಕ್ತಿ ಪರ ಆಯ್ಕೆಯ ಹಕ್ಕಿಗೆ ಗಂಭೀರವಾದ ಹಸ್ತಕ್ಷೇಪ ನಡೆಸಿದಂತಾಗುತ್ತದೆ. ವಯಸ್ಕರಾದ ಒಬ್ಬರಿಗೆ ಇನ್ನೊಬ್ಬರ ಜೊತೆ ಜೀವಿಸುವ ಹಕ್ಕು ಸಂಪೂರ್ಣ ವೈಯಕ್ತಿಕವಾಗಿದೆ. ಇದನ್ನು ನಿರಾಕರಿಸುವುದು ಜೀವ, ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಮೂಲಭೂತ ಹಕ್ಕು ಓರ್ವ ಜೀವನ ಸಂಗಾತಿಯ ಆಯ್ಕೆ ಮಾಡುವುದಕ್ಕೂ ಗೌರವದೊಂದಿಗೆ ಜೀವಿಸುವುದಕ್ಕೂ ಇರುವ ಹಕ್ಕುಗಳನ್ನು ಭಾರತದ ಸಂವಿಧಾನದ 21ನೇ ಪರಿಚ್ಛೇದ ಕೊಟ್ಟಿದೆ. ವಯಸ್ಕ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟು ಖಾಯಂ ಆಗಿ ಗೌರವಿಸಿದೆ ಎನ್ನುವುದಕ್ಕೆ ಕೇರಳದ ಹಾದಿಯ ಪ್ರಕರಣವನ್ನು ಪೀಠ ಉದ್ಧರಿಸಿತು.

ಮದುವೆಗಾಗಿರುವ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದಿನ ಏಕ ಸದ್ಯ ಪೀಠ ಸೆಪ್ಟಂಬರಿನಲ್ಲಿ ತೀರ್ಪು ನೀಡಿತ್ತು. ಇದನ್ನೀಗ ಡಿವಿಷನಲ್ ಬೆಂಚು ಸರಿಯಾಗಿಲ್ಲ ಎಂದು ತಿದ್ದುಪಡಿಸಿ ಮಾಡಿದೆ.