ಬೆಂಗಳೂರು: ಸಿಐಡಿ ಮಹಿಳಾ‌ ಡಿವೈಎಸ್ ಪಿ ಆತ್ಮಹತ್ಯೆ

0
1078

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬರು ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಐಡಿ ವಿಭಾಗದಲ್ಲಿ ಡಿವೈಎಸ್​ಪಿಯಾಗಿದ್ದ ವಿ. ಲಕ್ಷ್ಮೀ ಎಂಬ ಮಹಿಳಾ ಪೊಲೀಸ್ ಅಧಿಕಾರಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪರಿಚಿತರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಈ ನಿರ್ಧಾರಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ನಿನ್ನೆ ತಮ್ಮ ಪರಿಚಿತರ ಮನೆಗೆ ಊಟಕ್ಕೆ ತೆರಳಿದ್ದ ಲಕ್ಷ್ಮೀ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ದಕ್ಷ  ಪೊಲೀಸ್ ಅಧಿಕಾರಿಗಳು ಒತ್ತಡದ ಜೀವನ ನಡೆಸುತ್ತಿದ್ದಾರೆಯೇ ಎಂಬ ಚರ್ಚೆ ಮತ್ತೆ ಹುಟ್ಟು ಹಾಕಿದೆ.

33 ಹರೆಯದವರಾಗಿದ್ದ ಲಕ್ಷ್ಮೀ, ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು, 2014ರ ಬ್ಯಾಚ್​ನ ಕೆಎಸ್​ಪಿಎಸ್ ಅಧಿಕಾರಿ. 2017ರಲ್ಲಿ ಸಿಐಡಿ ಡಿವೈಎಸ್​ಪಿಯಾಗಿ ಅವರು ನೇಮಕಗೊಂಡಿದ್ದರು. ಪ್ರಸ್ತುತ ಇವರ ಗಂಡ ಹೈದರಾಬಾದ್ ನಲ್ಲಿದ್ದಾರೆಂದು ತಿಳಿದು ಬಂದಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಈ ಹಿಂದೆ ರಾಜ್ಯದಲ್ಲಿನ ಕೆಲವು ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೈದಾಗ ರಾಜ್ಯದ ಪೊಲೀಸ್ ಅಧಿಕಾರಿಗಳು ಒತ್ತಡದಿಂದ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಹುಟ್ಟುಹಾಕಿತ್ತು.