ಸನ್ಮಾರ್ಗ ವಾರ್ತೆ
ಚೆನ್ನೈ: ತೂತುಕುಡಿ ಸ್ಟಾರ್ಲೈಟ್ ಕಂಪೆನಿಯ ವಿರುದ್ಧ ಜನರ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಗುಂಡುಹಾರಾಟ ಘಟನೆಯ ಕುರಿತು ವಿಚಾರಣೆ ನಡೆಸುತ್ತಿರುವ ಜಸ್ಟಿಸ್ ಅರುಣಾ ಜಗದೀಶ್ರ ನೇತೃತ್ವದ ನ್ಯಾಯಾಂಗ ಆಯೋಗವು ಖ್ಯಾತ ಚಲನಚಿತ್ರ ನಟ ರಜನೀಕಾಂತ್ರಿಗೆ ನೋಟಿಸ್ ಕಳುಹಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಜನವರಿ 19ಕ್ಕೆ ಹಾಜರಾಗಿ ವಿವರಣೆ ನೀಡಬೇಕೆಂದು ನೋಟಿಸ್ ನಲ್ಲಿ ಆದೇಶ ನೀಡಲಾಗಿದೆ.
ಇದು ಎರಡನೇ ಬಾರಿ ರಜನೀಕಾಂತ್ಗೆ ನ್ಯಾಯಾಂಗದ ಆಯೋಗವು ನೋಟಿಸು ಕಳುಹಿಸುತ್ತಿದೆ. ಈ ಹಿಂದೆ ಕಳುಹಿಸಲಾಗಿದ್ದ ಸಮನ್ಸ್ ಗೆ ರಜನೀಕಾಂತ್ ಉತ್ತರ ನೀಡಿರಲಿಲ್ಲ.
ಜನರ ಪ್ರತಿಭಟನೆಯ ನಡುವೆ ನುಸುಳಿದ ಸಮಾಜ ವಿರೋಧಿ ಶಕ್ತಿಗಳು ವಿಷಯವನ್ನು ಬಿಗಡಾಯಿಸಿತ್ತು ಎಂದು ತೂತುಕುಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಜನೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದ ರಜನೀಕಾಂತ್ರ ಈ ನಿಲುವು ವಿವಾದವಾಗಿತ್ತು. 2018 ಮೇ 22ಕ್ಕೆ ಪರಿಸರ-ಆರೋಗ್ಯ ಸಮಸ್ಯೆಗಳ ಕುರಿತು ಜನರು ಆಯೋಜಿಸಿದ್ದ ಜಿಲ್ಲಾಧಿಕಾರಿ ಕಚೇರಿ ಮಾರ್ಚ್ ಪೊಲೀಸರ ಗುಂಡು ಹಾರಾಟದಲ್ಲಿ ಕೊನೆಗೊಂಡಿತ್ತು. ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದರು. ಬಳಿಕ 2018 ಮೇ 24ಕ್ಕೆ ತಮಿಳ್ನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯು
ಸ್ಟಾರ್ಲೈಟ್ ಕಂಪೆನಿಯನ್ನು ಮುಚ್ಚಿ ಸೀಲು ಹಾಕಿತ್ತು. ಎರಡು ವರ್ಷದಿಂದ ಕಂಪೆನಿ ಮುಚ್ಚಿಕೊಂಡ ಸ್ಥಿತಿಯಲ್ಲಿಯೇ ಇದೆ.












