ಬಿಜೆಪಿಯಿಂದ ಎನ್.ಐ.ಎ.ಯ ದುರ್ಬಳಕೆ: SDPI ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ

0
418

ಸನ್ಮಾರ್ಗ ವಾರ್ತೆ

ಬೆಂಗಳೂರು : ಡಿ.ಜೆ.ಹಳ್ಳಿ ಹಾಗೂ ಕೆ.ಜಿ.‌ಹಳ್ಳಿಯಲ್ಲಿ ನಡೆದ ಹಿಂಸೆಯನ್ನಿಟ್ಟುಕ್ಕೊಂಡು ಬಿಜೆಪಿ ಪಕ್ಷವು ಎಸ್ ಡಿ ಪಿ ಐ ಪಕ್ಷದ ಮೇಲೆ ಆರೋಪ‌ ಕೂರಿಸಿ, ಎನ್ ಐ ಎ ಯನ್ನು ಬಳಸಿಕೊಳ್ಳುವ ಮೂಲಕ ದಮನಿಸಲು ಪ್ರಯತ್ನಿಸುತ್ತಿದೆ ಎಂದು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಹೇಳಿದ್ದಾರೆ.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್‌ ಇಂಡಿಯಾ ದ ವತಿಯಿಂದ ಬೆಂಗಳೂರಿನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎನ್.ಐ.ಎ. ಮತ್ತು ಇತರ ತನಿಖಾ ಸಂಸ್ಥೆಗಳನ್ನು ಜನಪರ ಹೋರಾಟಗಾರರ ವಿರುದ್ಧ ನಿರಂತರ ದುರ್ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರವಾದಿ ನಿಂದನೆ ವಿರುದ್ಧ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರ ರಾಜಕೀಯ ನಂಟಿನ ಭಾಗವಾಗಿರುತ್ತದೆ. ಇದರ ತನಿಖೆಯನ್ನು ಮೊದಲು ರಾಜ್ಯ ಪೊಲೀಸರು ನಂತರದಲ್ಲಿ ರಾಷ್ಟ್ರೀಯ ತನಿಖಾ ದಳವು ತನಿಖೆ ಮಾಡುತ್ತಿವೆ. ಈಗಾಗಲೇ ಸಾವಿರಾರು ಜನರ ವಿಚಾರಣೆಯನ್ನು ನಡೆಸಲಾಗಿದೆ. ಇದರ ಅಡಿಯಲ್ಲಿ ಕೇಂದ್ರ ಬಿ.ಜೆ.ಪಿ ನಾಯಕರ ನಿರ್ದೇಶನ ಮೇರೆಗೆ ಎಸ್.ಡಿ.ಪಿಐ. ಪಕ್ಷವನ್ನು ಸಿಲುಕಿಸುವ ಪ್ರಯತ್ನವು ರಾಜಕೀಯ ಪ್ರೇರಿತವಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನಿನ್ನೆ ಎಸ್.ಡಿ.ಪಿ.ಐ.ನ ಬೆಂಗಳೂರು ಜಿಲ್ಲಾಧ್ಯಕ್ಷರಾದ ಮಹಮ್ಮದ್ ಶರೀಫ್ ಹಾಗೂ ಕೆಲವು ಸ್ಥಳೀಯ ಕಾರ್ಯಕರ್ತನನ್ನು ಎನ್.ಐ.ಎ. ಬಂಧಿಸಿದೆ. ಎಸ್.ಡಿ.ಪಿ.ಐ. ಕಾರ್ಯಕರ್ತರು ನಿರಂತರವಾಗಿ ಎನ್.ಐ.ಎ. ಕಛೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಿರುತ್ತಾರೆ. ಕೆಲವರ ಮೊಬೈಲ್ ಪರಿಶೀಲನೆ ನಡೆಸಿಯೂ, ಯಾವುದೇ ಸಾಕ್ಷ್ಯಗಳು ಸಿಕ್ಕಿರುವುದಿಲ್ಲ. ಪಕ್ಷದ ಕೆಲವು ಕಛೇರಿಗಳಿಗೂ ದಾಳಿ ಮಾಡಲಾಗಿತ್ತು. ಎಲ್ಲಾ ಆಯಾಮಗಳಲ್ಲೂ ಈ ಗಲಭೆಯಲ್ಲಿ ಎಸ್.ಡಿ.ಪಿ.ಐ.ಯ ಯಾವುದೇ ಪಾತ್ರವಿಲ್ಲ ಎಂದು ಕಂಡು ಬಂದಿದೆ.‌ ಆದರೂ ಕೂಡ ಎಸ್ ಡಿ ಪಿ ಐ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿ.ಜೆ.ಪಿ. ಪರವಾಗಿ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದ ನವೀನ್ ಪ್ರವಾದಿ ನಿಂದನೆ ಪೋಸ್ಟ್ ಮಾಡಿದ ಮೇಲೆ ಸ್ಥಳೀಯರು ಭಾವೋದ್ರಿಕ್ತರಾಗಿದ್ದರು. ತನಿಖಾ ಸಂಸ್ಥೆಗಳು ಹಿಂಸೆಗೆ ಮೂಲ ಪ್ರಚೋದನೆ ನೀಡಿದ ನವೀನ್ ಮೇಲೆ ಸಾಮಾನ್ಯ ಕೇಸುಗಳನ್ನು ಹಾಕಿದ ಕಾರಣ ಜಾಮೀನು ಪಡೆದು, ಬಿಡುಗಡೆಗೊಂಡಿದ್ದಾನೆ. ಆದರೆ ಬೆಂಗಳೂರಿನ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಕರಾಳ ಕಾನೂನಿನಡಿ ಬಂಧಿಸಲಾಗಿದ್ದು, ಜಾಮೀನು ಸಿಗದಂತೆ ಮಾಡಿ ಅವರ ಭವಿಷ್ಯವನ್ನು ಕತ್ತಲೆಗೆ ದೂಡುವಲ್ಲಿ ತನಿಖಾ ಸಂಸ್ಥೆಗಳೂ ಪಾತ್ರ ವಹಿಸಿದೆ. ಬಂಧಿತ ಅಮಾಯಕ ಯುವಕರ ನೂರಾರು ಕುಟುಂಬಗಳು ದುಃಖತಪ್ತರಾಗಿದ್ದಾರೆ ಎಂದು ಅಫ್ಸರ್ ತಿಳಿಸಿದ್ದಾರೆ.

ಕೊರೋನಾ ಸಂತ್ರಸ್ಥರಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿ ದೇಶಾದ್ಯಂತ ಎಲ್ಲಾ ಧರ್ಮೀಯರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಎಸ್.ಡಿ.ಪಿ.ಐ. ಪಕ್ಷವು ಆಗಸ್ಟ್ ತಿಂಗಳಿನಲ್ಲಿ ಈ ಸೇವಾಕಾರ್ಯಗಳನ್ನು ಮುಂದುವರಿಸಲು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಬಂಧ ಬೆಂಗಳೂರು ಜಿಲ್ಲೆಯ ಎಲ್ಲಾ ಹಂತದ ಸಭೆಗಳನ್ನು ನಿರಂತರ ನಡೆಸಿತ್ತು. ಆದರೆ ಈ ರೀತಿಯ ಸಾಮಾನ್ಯ ಸಭೆಗಳನ್ನು ಎನ್.ಐ.ಎ. ಕೆ.ಜೆ. ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆಯ ಸಂಚಿಗಾಗಿ ನಡೆಸಿದ ಸಭೆಗಳೆಂದು ಸುಳ್ಳು ಸಾಕ್ಷಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದವರು ಹೇಳಿದ್ದಾರೆ.

ಕೇಂದ್ರ ಬಿ.ಜೆ.ಪಿ. ಸರ್ಕಾರವು ಭೀಮಾ ಕೊರೆಗಾಂವ್ ಪ್ರತಿಭಟನೆ, ದೆಹಲಿ ಗಲಭೆ ಮತ್ತು ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಹಿಂಸಾಚಾರದ ಹೆಸರಲ್ಲಿ ನಿರಂತರವಾಗಿ ಸಾಮಾಜಿಕ ಹೋರಾಟಗಾರರನ್ನು, ರಾಜಕೀಯ ವಿರೋಧ ಪಕ್ಷದವರನ್ನು, ಎಡಪಂಥೀಯರನ್ನು ಹಾಗೂ ಮುಸ್ಲಿಮರನ್ನು ಸುಳ್ಳು ಕೇಸುಗಳಿಗೆ ಈಡು ಮಾಡಿ ಬಂಧಿಸುವುದು ಕೂಡಲೇ ನಿಲ್ಲಿಸಬೇಕು. ನೈಜ ಅಪರಾಧಿಗಳಾದ ಬಿಜೆಪಿ ಮತ್ತು ಸಂಘ ಪರಿವಾರದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಿಷ್ಪಕ್ಷಪಾತ ತನಿಖೆ ಮಾಡಿ ನೈಜ ಅಪರಾಧಿಗಳನ್ನು ಶಿಕ್ಷಿಸಬೇಕು. ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಯು.ಎ.ಪಿ.ಎ. ಯಂತಹ ಕರಾಳ ಕಾನೂನನ್ನು ದುರ್ಬಳಕೆ ಮಾಡಬಾರದು. ತನಿಖಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯಬಾರದು ಎಂದು ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್‌ ಖಾನ್, ರಾಜ್ಯ ಪ್ರ. ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಕ್ರಂ ಹಸನ್, ರಾಜ್ಯ ಸಮಿತಿ ಸದಸ್ಯ ಫಯಾಝ್ ಬೆಂಗಳೂರು, ಬೆಂಗಳೂರು ಜಿಲ್ಲಾ ಹೆಚ್.ಎಂ ಗಂಗಪ್ಪ, ಬೆಂಗಳೂರು ಜಿಲ್ಲಾ ಪ್ರ. ಕಾರ್ಯದರ್ಶಿ ಸಲೀಂ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.