ಕೊಲ್ಕತ್ತಾ: ಸಮುದಾಯಗಳಲ್ಲಿ ಹೆಚ್ಚುತ್ತಿರುವ ದ್ವೇಷದ ತಡೆಗೆ ‘ಧಾರ್ಮಿಕ್ ಜನ ಮೋರ್ಚಾ’ ರಚಿಸಿದ ಧಾರ್ಮಿಕ ಮುಖಂಡರು

0
684

ಸನ್ಮಾರ್ಗ ವಾರ್ತೆ

ಕೊಲ್ಕತ್ತಾ: ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ದ್ವೇಷವನ್ನು ನಿಗ್ರಹಿಸಲು ವಿವಿಧ ಧರ್ಮಗಳ ನಾಯಕರು ಒಂದುಗೂಡಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ‘ಧಾರ್ಮಿಕ್ ಜನ ಮೋರ್ಚಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ದೇಶದ ವಿವಿಧ ಭಾಗಗಳ ಧಾರ್ಮಿಕ ಮುಖಂಡರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಕೋಮು ಸೌಹಾರ್ದತೆಯ ವಾತಾವರಣವನ್ನು ಬೆಳೆಸಲು ವಿಭಿನ್ನ ನಂಬಿಕೆಯ ಜನರನ್ನು ಒಟ್ಟುಗೂಡಿಸುವುದು ಮತ್ತು ಅದಕ್ಕಾಗಿ ಕೆಲಸ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದು, ಮೋರ್ಚಾವು ದೇಶದ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳ ಪ್ರತಿನಿಧಿ ವೇದಿಕೆಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ನಾಯಕ ಸಲೀಂ ಇಂಜಿನಿಯರ್ ತಿಳಿಸಿದ್ದಾರೆ.

ಅಧ್ಯಕ್ಷೀಯ ಭಾಷಣ ಮಾಡಿದ ಜೆಐಹೆಚ್ ಉಪಾಧ್ಯಕ್ಷ ಪ್ರೊ.ಮೊಹಮ್ಮದ್ ಸಲೀಮ್ ಎಂಜಿನಿಯರ್, “ವಿವಿಧ ಧರ್ಮಗಳು ಮತ್ತು ನಂಬಿಕೆಗಳ ಜನರು ಭಾರತದಲ್ಲಿ ವಿವಿಧ ಭಾಷೆ ಮತ್ತು ಸಂಸ್ಕೃತಿಗಳೊಂದಿಗೆ ವಾಸಿಸುತ್ತಿದ್ದಾರೆ, ಇದು ನಮ್ಮ ದೇಶದ ವೈವಿಧ್ಯತೆ ಮತ್ತು ಇದನ್ನು ನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಆದರೆ ಕೆಲವು ಉಗ್ರಗಾಮಿ ಅಂಶಗಳು ಈ ವೈವಿಧ್ಯತೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಅವರನ್ನು ಒಟ್ಟಾಗಿ ತಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫಾದರ್ ಸಂಜೀವ್ ದಾಸ್, ಸ್ವಾಮಿ ಪರಮಾನಂದ್ ಜಿ ಗಿರಿ ಮಹಾರಾಜ್, ಸ್ವಾಮಿ ಉತ್ತಮಾನಂದ ಜಿ ಮಹಾರಾಜ್, ಡಾ. ವಚನ್ ಸಿಂಗ್ ಸರಳ್, ವರುಣ್ ಜ್ಯೋತಿ, ಇಂದ್ರಾಣಿ ದಾಸ್ ಗೀತಾ, ಆಚಾರ್ಯ ಗೋಪಾಲ್ ಛತ್ರಿ, ಸೈಯದ್ ಇರ್ಫಾನ್ ಬಶೀರ್ ಸೇರಿದಂತೆ ಮತ್ತಿತರ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಕೃಷ್ಣ ಮಿಷನ್‌ನ ಕಾರ್ಯಕರ್ತ ಸ್ವಾಮಿ ಉತ್ತಮಾನಂದ್ ಮಹಾರಾಜ್ ಅವರನ್ನು ಧಾರ್ಮಿಕ್ ಜನ್ ಮೋರ್ಚಾದ ಸಂಚಾಲಕರಾಗಿ ಆಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಮತ್ತು ಜಾತಿ ತಾರತಮ್ಯ, ಧರ್ಮದ ಹೆಸರಿನಲ್ಲಿ ಹಿಂಸಾಚಾರ, ದೇಶದಲ್ಲಿ ಚಾಲ್ತಿಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಪರಸ್ಪರ ಐಕ್ಯತೆಯನ್ನು ಉತ್ತೇಜಿಸುವ ಮತ್ತು ಒಟ್ಟಾಗಿ ಕೆಲಸ ಮಾಡುವ ಸಾಧ್ಯತೆಯ ಬಗ್ಗೆಯೂ ಅವರು ಚರ್ಚಿಸಿದ್ದಾರೆ.

ಜೆಐಹೆಚ್ ಕೇಂದ್ರ ನಿಯೋಗದಲ್ಲಿ ಪಿಆರ್ ವಿಭಾಗದ ನಿರ್ದೇಶಕ ಮುಜ್ತಬಾ ಫಾರೂಕ್, ರಾಷ್ಟ್ರೀಯ ಕಾರ್ಯದರ್ಶಿ ಮಲಿಕ್ ಮೊತಾಸಿಮ್ ಖಾನ್ ಮತ್ತು ಸಹಾಯಕ ಕಾರ್ಯದರ್ಶಿ ವಾಸಿಕ್ ನದೀಮ್ ಖಾನ್, ಪಶ್ಚಿಮ ಬಂಗಾಳದ ಜೆಐಹೆಚ್ ರಾಜ್ಯಾಧ್ಯಕ್ಷ ಮೌಲಾನಾ ಅಬ್ದುರ್ರಫೀಕ್ ಮತ್ತು ರಾಜ್ಯ ಮಾಧ್ಯಮ ಕಾರ್ಯದರ್ಶಿ ಮಶಿಯೂರ್ರಹ್ಮಾನ್ ಉಪಸ್ಥಿತರಿದ್ದರು.