ಸನ್ಮಾರ್ಗ ವಾರ್ತೆ
ಮುಂಬೈ: ಮನೆಯೊಂದಕ್ಕೆ ನುಗ್ಗಿ ಕಳ್ಳತನ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳರಿಬ್ಬರನ್ನು ಸ್ಥಳೀಯರು ಅರೆನಗ್ನವಾಗಿ ಮೆರವಣಿಗೆ ಘಟನೆ ಮುಂಬೈ ಸಮೀಪದ ನಡೆದಿದ್ದು, ಘಟನೆಯ ಸಂಬಂಧ ಮೆರವಣಿಗೆ ನಡೆಸಿದ 15 ಮಂದಿ ಸ್ಥಳೀಯರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕಳೆದ ಬುಧವಾರ ಮುಂಬೈಯ ಕಂಡಿವಲಿಯ (ಪಶ್ಚಿಮ) ಕಚ್ಪಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾನೂನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು 15 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಕಳ್ಳರು ಈ ಪ್ರದೇಶದ ಮನೆಯೊಂದಕ್ಕೆ ನುಗ್ಗಿ ಮೊಬೈಲ್ ಫೋನ್ ಮತ್ತು 30,000 ರೂ. ಕದಿಯುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದರು. ಇದರಿಂದ ಆಕ್ರೋಶಿತರಾದ ಸ್ಥಳೀಯರ ಗುಂಪು ಇಬ್ಬರನ್ನೂ ಕೋಣೆಯೊಂದರಲ್ಲಿ ಕೂಡಿ ಹಾಕಿ, ತಲೆ ಬೋಳಿಸಿದ್ದಲ್ಲದೇ, ಹಲ್ಲೆ ನಡೆಸಿ, ಒಳ ಉಡುಪಿನಲ್ಲಿ ಮೆರವಣಿಗೆ ನಡೆಸಿದ್ದರು.
ಹಲ್ಲೆಯ ವಿಡಿಯೋ ವೈರಲಾದ್ದನ್ನು ಗಮನಿಸಿದ ಮುಂಬೈ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವೀಡಿಯೋ ಆಧಾರದ ಮೇಲೆ 15 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದಾರೆ ಮತ್ತು ಅದನ್ನು ಚಿತ್ರೀಕರಿಸಿದವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
“ಅಪರಾಧ ಮಾಡಿದ ಪುರುಷರನ್ನು ನಾವು ಬಂಧಿಸುತ್ತೇವೆ. ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಮತ್ತು ಆಪಾದಿತ ದರೋಡೆಕೋರರನ್ನು ಅವರಿಗೆ ಹಸ್ತಾಂತರಿಸಬೇಕಿತ್ತು. ಆದರೆ ಕಾನೂನು ಕೈಗೆತ್ತಿಕೊಂಡದ್ದರಿಂದ ಕೇಸು ದಾಖಲಿಸಿದ್ದು, ತನಿಖೆ ಮುಂದುವರಿಯಲಿದೆ ಎಂದು ಕಂಡಿವಲಿ ಪೊಲೀಸ್ ಠಾಣೆಯ ಸನ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.












