ರೈತರನ್ನು ಭಯೋತ್ಪಾದಕರು ಎಂದ ಕೃಷಿ ಸಚಿವರ ರಾಜೀನಾಮೆಗೆ ವೆಲ್ಫೇರ್ ಪಾರ್ಟಿ ಆಗ್ರಹ

0
497

ಸನ್ಮಾರ್ಗ ವಾರ್ತೆ

ಬೆಂಗಳೂರು: ನವದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಪ್ರತಿಭಟನೆ ಅಲ್ಲ, ಹೋರಾಟಗಾರರು ರೈತರ ವೇಷದಲ್ಲಿರುವ ಭಯೋತ್ಪಾದಕರು ಎಂದು ರೈತರ ಹೋರಾಟವನ್ನು ಹಾಗೂ ರೈತರನ್ನು ಜರಿದಿರುವ ಕೃಷಿ ಸಚಿವ ಬಿಸಿ ಪಾಟೀಲ್ ಅವರು ಸಚಿವ ಸ್ಥಾನದಲ್ಲಿರಲು ಯೋಗ್ಯರಲ್ಲ. ಕೂಡಲೇ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆಗ್ರಹಿಸಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿಯಲ್ಲಿ ಕಳೆದ ಎರಡು ತಿಂಗಳಿಂದ ಹೋರಾಟ ಮಾಡುತ್ತಿರುವ ರೈತರನ್ನು ಭಯೋತ್ಪಾದಕರು ಎಂಬ ಪದ ಬಳಸಿ ರೈತ ಸಮೂಹವನ್ನು ಸಚಿವರು ನಿಂದಿಸಿದ್ದಾರೆ. ರೈತಪರ ಕಾಳಜಿ ಇಲ್ಲದ ವ್ಯಕ್ತಿ ಕೃಷಿ ಸಚಿವರಾಗಲಿಕ್ಕೆ ಅರ್ಹನಲ್ಲ.

ಕೃಷಿಕರೇ ದೇಶದ ಬೆನ್ನೆಲುಬು ಎಂದು ಹೇಳಿಕೊಂಡು, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ. ರೈತರ ನ್ಯಾಯ ಪರವಾದ ಹೋರಾಟಕ್ಕೆ ಸ್ಪಂದನೆ ನೀಡುವ ಬದಲು ರೈತರನ್ನು ಕಡೆಗಣಿಸುವ ಕೃತ್ಯ ಎಸಗಿರುವ ಇಂತಹ ಅಯೋಗ್ಯರ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.

ಮುಖ್ಯಮಂತ್ರಿ ಯಡಿಯೂರಪ್ಪನವರು ಇಂಥವರನ್ನು ತಮ್ಮ ಸಚಿವ ಸಂಪುಟದಿಂದ ಕೈಬಿಡುವುದೇ ಲೇಸು ಎಂದು ಹೇಳಿದ ಅವರು ಕೂಡಲೇ ಕೃಷಿ ಸಚಿವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು.