ಸನ್ಮಾರ್ಗ ವಾರ್ತೆ
ಕೋಲ್ಕತಾ: ಕಳೆದ ವಾರ ನಡೆದ ರ್ಯಾಲಿಯ ವೇಳೆ “ಗೋಲಿ ಮಾರೋ …(ದೇಶದ್ರೋಹಿಗಳನ್ನು ಶೂಟ್ ಮಾಡಿ)” ಎಂಬ ಘೋಷಣೆ ಕೂಗಿದ್ದ ಆರೋಪದ ಮೇಲೆ ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಂತೆ ಆದೇಶಿಸಿದ್ದ ಬಂಗಾಳದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ.
ಕೋಲ್ಕತಾದ ಚಂದನ್ ನಗರದ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಕಬೀರ್ “ವೈಯಕ್ತಿಕ ಕಾರಣಗಳನ್ನು” ಉಲ್ಲೇಖಿಸಿ ರಾಜೀನಾಮೆ ನೀಡಿರುವ ಬಗ್ಗೆ ಎನ್ ಡಿ.ಟಿ.ವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ಡಿಸೆಂಬರ್ನಲ್ಲಿ ಇನ್ಸ್ಪೆಕ್ಟರ್ ಜನರಲ್ ಹುದ್ದೆಗೆ ಭಡ್ತಿ ಪಡೆದಿದ್ದರು. ಜನವರಿ 21 ರಂದು ಸುವೆಂದು ಅಧಿಕಾರಿ ನೇತೃತ್ವದಲ್ಲಿ ನಡೆದಿದ್ದ ರ್ಯಾಲಿಯ ವೇಳೆ “ಗೋಲಿ ಮಾರೊ” ಘೋಷಣೆಯನ್ನು ಕೂಗಿದ ಮೂವರು ಬಿಜೆಪಿ ಬೆಂಬಲಿಗರನ್ನು, ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಚಂದನ್ ನಗರದ ಸ್ಥಳೀಯ ಬಿಜೆಪಿ ಮುಖಂಡ ಸುರೇಶ್ ಶಾ ಮತ್ತು ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಒಮ್ಮೆ ಮಮತಾ ಬ್ಯಾನರ್ಜಿಯ ಆಪ್ತ ಸಹಾಯಕರಾಗಿದ್ದ ಸುವೆಂದು ಅಧಿಕಾರಿ ಕಳೆದ ತಿಂಗಳು ಟಿ ಎಂ ಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದರು.
ಬಂಧನ ಸಂಪೂರ್ಣ ಪೊಲೀಸ್ ಇಲಾಖೆಯ ತೀರ್ಮಾನವಾಗಿದ್ದು, ನಮ್ಮ ಪಕ್ಷದ ಯಾವುದೇ ಕೈವಾಡ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತಾ ರಾಯ್ ಹೇಳಿದ್ದಾರೆ. ಕಬೀರ್ ಅವರ ಪತ್ನಿ ಅನಿಂದಿತಾ ಕಬೀರ್ ಕಳೆದ ವರ್ಷ ನವೆಂಬರ್ ನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಯಾದ ಕಾರಣ, ಅವರು ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರಬಹುದು ಎಂಬ ಊಹಾಪೋಹ ಎದ್ದಿದ್ದು, ಆದಾಗ್ಯೂ, ಹುಮಾಯೂನ್ ಕಬೀರ್ ಅದನ್ನು ತಳ್ಳಿಹಾಕಿದ್ದಾರೆ.












