ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕಾಗಿ ರಾಜಸ್ಥಾನ ಕಾಂಗ್ರೆಸ್ ವಿದ್ಯಾರ್ಥಿ ವಿಭಾಗ ಹಣ ಸಂಗ್ರಹ ಯಜ್ಞ ನಡೆಸುತ್ತಿದೆ ಎಂಬ ವರದಿಗಳ ಕುರಿತು ಕಾಂಗ್ರೆಸ್ ನಾಯಕರ ನಡುವೆಯೇ ಅತೃಪ್ತಿ ಇದೆ.
ಪಾರ್ಟಿಯ ಮೂಲ ಆಶಯದ ಕುರಿತು ಕಾಂಗ್ರೆಸ್ಸಿನಲ್ಲಿ ಸ್ಪಷ್ಟವಾದ ಚರ್ಚೆ ನಡೆಯುವ ಅಗತ್ಯವಿದೆ ಎಂಬುದನ್ನು ತೋರಿಸುವ ಘಟನೆ ಇದು ಎಂದು ಮಾಜಿ ಸಚಿವ ಮನೀಶ್ ತಿವಾರಿ ಬಹಿರಂಗವಾಗಿ ಹೇಳಿದ್ದಾರೆ. ಭಾರತ ನ್ಯಾಶನಲ್ ಕಾಂಗ್ರೆಸ್ ಜಾತ್ಯತೀತ ಪಾರ್ಟಿಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮಂದಿರಕ್ಕೆ ದೇಣಿಗೆಯ ಕುರಿತು ಯಾವ ಪ್ರಚಾರವೂ ನಡೆದಿಲ್ಲ ಎನ್ಎಸ್ಯುಐ ಅಧ್ಯಕ್ಷ ನೀರಜ್ ಕುಂದನ್ ಹೇಳಿದರು. ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನಡೆಸುತ್ತಿರುವ ಕೊಳ್ಳೆಯನ್ನು ಬಹಿರಂಗಗೊಳಿಸಲು ಪ್ರತೀಕಾತ್ಮಕ ಪ್ರತಿಭಟನೆಯನ್ನು ರಾಜಸ್ಥಾನದಲ್ಲಿ ನಡೆಸಿರುವುದಾಗಿ ಕುಂದನ್ ಹೇಳಿದರು.
“ಏಕ್ ರೂಪ್ಯ ರಾಮ್ ಕೇ ನಾಮ್” ಎಂಬ ಕಾರ್ಯಕ್ರಮ ಜೈಪುರದ ಕಾಮರ್ಸ್ ಕಾಲೇಜಿನಲ್ಲಿ ಎನ್ಎಸ್ಯು ರಾಜ್ಯ ಅಧ್ಯಕ್ಷ ಅಭಿಶೇಕ್ ಚೌಧರಿಯ ನೇತೃತ್ವದಲ್ಲಿ ನಡೆದಿದೆ. ಈ ಕುರಿತು ತನಗೆ ಮಾಹಿತಿ ಲಭಿಸಿರಲಿಲ್ಲ ಎಂದು ಎಐಸಿಸಿ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.












