ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಾರತದಲ್ಲಿ ನಡೆಯುವ ರೈತ ಹೋರಾಟದ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಚರ್ಚೆ ನಡೆದಿದ್ದು ರೈತರ ಸುರಕ್ಷೆ, ಮಾಧ್ಯಮ ಸ್ವಾತಂತ್ರ್ಯ ವಿಷಯಗಳ ಮೇಲಿನ ಚರ್ಚೆಯನ್ನು ಲಂಡನ್ನ ಭಾರತ ದೂತವಾಸ ಟೀಕಿಸಿದೆ. ಭಾರತ ಹೈಕಮಿಶನ್ ಪತ್ರಿಕಾ ಹೇಳಿಕೆ ನೀಡಿ ಸಂತುಲಿತ ಸಂವಾದದ ಬದಲು, ವಾಸ್ತವಿಕ ಆಧಾರಿತ ಸಾಕ್ಷ್ಯಗಳಿಲ್ಲದೆ ತಪ್ಪಾದ ಹಕ್ಕುವಾದಗಳನ್ನು ಎತ್ತಿರುವುದನ್ನು ಖಂಡಿಸುತ್ತೇವೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಕುರಿತು ಅದರ ಸಂಸ್ಥೆಗಳ ಕುರಿತು ಆಕ್ಷೇಪ ಎತ್ತಲಾಗುತ್ತಿದೆ ಎಂದು ದೂತವಾಸ ತನ್ನ ಹೇಳಿಕೆಯಲ್ಲಿ ವಿವರಿಸಿದೆ.
ಭಾರತೀಯ ವಂಶಸ್ಥ ಮೈದೆನ್ಹೆಡ್ ಲಿಬರಲ್ ಡೆಮಕ್ರಾಟಿಕ್ ನಾಯಕ ಗುರ್ಚ್ ಸಿಂಗ್ ನೀಡಿದ ಅರ್ಜಿಯ ಆಧಾರದಲ್ಲಿ 90 ನಿಮಿಷಗಳ ಚರ್ಚೆಯನ್ನು ಬ್ರಿಟಿಷ್ ಪಾರ್ಲಿಮೆಂಟು ಸೋಮವಾರ ಆಯೋಜಿಸಿತ್ತು. ಲೇಬರ್ ಪಾರ್ಟಿ, ಲಿಬರಲ್ ಡೆಮಕ್ರಾಟ್ಸ್, ದ.ಸ್ಕಾಟಿಶ್ ಪಾರ್ಟಿಗಳ ಸಂಸದರು ಚರ್ಚೆಯಲ್ಲಿ ಭಾಗವಹಿಸಿದ್ದರು. ಲಕ್ಷಾಂತರ ಇಂಗ್ಲೆಂಡ್ ನಿವಾಸಿಗಳು ಅರ್ಜಿಗೆ ಸಹಿ ಹಾಕಿದ್ದರು.
ಬ್ರಿಟಿಷ್ ಮಾಧ್ಯಮಗಳ ಸಹಿತ ವಿದೇಶಿ ಮಾಧ್ಯಮಗಳು ಭಾರತದಲ್ಲಿವೆ. ಚರ್ಚೆಗಳಿಗೆ ಕಾರಣವಾದ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಇದೆಯೆಂಬ ಪ್ರಶ್ನೆ ಎದ್ದಿಲ್ಲ ಎಂದು ಭಾರತ ದೂತವಾಸ ಹೇಳಿದೆ.
ಕಳೆದ ನವೆಂಬರಿನಲ್ಲಿ ವಿವಾದ ಕೃಷಿ ಕಾನೂನು ವಿರೋಧಿಸಿ ರಾಜಧಾನಿ ದಿಲ್ಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶಗಳ ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪಾಪ್ ತಾರೆ ರಿಹಾನ್ನ, ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್, ಅಮೆರಿಕ, ಯುಕೆ ಪಾರ್ಲಿಮೆಂಟ್ ಸದಸ್ಯರು ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.












