ಕಾನೂನು ಪ್ರಕ್ರಿಯೆಗಳು ಬಹುತೇಕ ಪೂರ್ಣ: ಇವತ್ತು ರಾತ್ರಿ ತುಂಬೆ ತಲುಪಲಿರುವ ಪ್ರೊ. ಎಂ. ಅಬೂಬಕರ್ ತುಂಬೆ ಮೃತದೇಹ

0
717

ಸನ್ಮಾರ್ಗ ವಾರ್ತೆ

ನಮ್ಮ ಪ್ರತಿನಿಧಿಯಿಂದ

ಬಂಟ್ವಾಳ, ಮಾ.24: ಶಿಕ್ಷಣ ತಜ್ಞ, ಜಾಗತಿಕ ಪ್ರಭಾವಿ ವ್ಯಕ್ತಿತ್ವಗಳಲ್ಲಿ ಓರ್ವರೆಂದು ಗುರುತಿಸಿಕೊಂಡಿದ್ದ ಮತ್ತು ಹಲವಾರು ಸನ್ಮಾನಕ್ಕೆ ಪಾತ್ರವಾಗಿದ್ದ ಯುಎಇ ರಾಸ್ ಅಲ್ ಖೈಮಾ ಸ್ಕಾಲರ್ಸ್ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರೂ ಆದ ಪ್ರೊ. ಎಂ. ಅಬೂಬಕರ್ ತುಂಬೆ ಅವರ ಮೃತದೇಹವನ್ನು ತವರಿಗೆ ತರುವ ಪ್ರಕ್ರಿಯೆಗಳು ಬಹುತೇಕ ಕೊನೆಗೊಳ್ಳುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇಂದು ರಾತ್ರಿ (ಬುಧವಾರ, ಮಾರ್ಚ್ – 24) 12 ಗಂಟೆಯ ಸುಮಾರಿಗೆ ಮಂಗಳೂರು ತಲುಪಲಿದೆ ಎಂದು ಯು ಏ ಇ ಯಲ್ಲಿರುವ ಮೃತರ ಕುಟುಂಬ ಮಿತ್ರ ಬಷೀರ್ ವಿ ಕೆ ಸನ್ಮಾರ್ಗಕ್ಕೆ ತಿಳಿಸಿದ್ದಾರೆ. ಅಂತ್ಯ ಸಂಸ್ಕಾರವು ತುಂಬೆ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಈಗಾಗಲೇ ಮರಣ ಸರ್ಟಿಫಿಕೇಟ್ ದೊರಕಿದ್ದು, ವೀಸಾ ರದ್ದು ಪ್ರಕ್ರಿಯೆ ಪೂರ್ಣಗೊಂಡಿದೆ. ಅದೇರೀತಿ ಪಾಸ್ ಪೋರ್ಟ್ ರದ್ದು ಪ್ರಕ್ರಿಯೆಯೂ ಪೂರ್ಣಗೊಳ್ಳುತ್ತಿದ್ದು, ನ್ಯಾಯಾಲಯದಿಂದ ನೋ ಅಬ್ಜೆಕ್ಷನ್ ಪತ್ರ ದೊರಕಿದ ಕೂಡಲೇ ಮೃತದೇಹವನ್ನು ದುಬೈ ವಿಮಾನ ನಿಲ್ದಾಣಕ್ಕೆ ತರಬೇಕಿದೆ. ಸಂಜೆ 6 ಗಂಟೆಗೆ ದುಬೈಯಿಂದ ಮಂಗಳೂರಿಗೆ ಬರಲಿರುವ ವಿಮಾನದಲ್ಲಿ ಮೃತದೇಹವನ್ನು ರವಾನಿಸಲು ಎಲ್ಲ ಪ್ರಯತ್ನ ನಡೆಯುತ್ತಿದೆ ಎಂದು ಬಷೀರ್ ವಿ ಕೆ ತಿಳಿಸಿದ್ದಾರೆ. ತುಂಬೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.

ಸನ್ಮಾರ್ಗ ಪತ್ರಿಕೆಯ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದ ಮತ್ತು ಓದುಗರೂ ಆಗಿದ್ದ ಪ್ರೊ. ಎಂ. ಅಬೂಬಕರ್ ತುಂಬೆ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಮಂಗಳೂರು ನಗರಾಧ್ಯಕ್ಷ ಕೆ ಎಂ ಅಶ್ರಫ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರಿಗಾಗಿ ಪ್ರಾರ್ಥಿಸಿದ್ದಾರೆ.