ಸನ್ಮಾರ್ಗ ವಾರ್ತೆ
ನವದೆಹಲಿ: ಜಮಾಅತೆ ಇಸ್ಲಾಮೀ ಹಿಂದ್ನ ಮಾಜಿ ಉಪಾಧ್ಯಕ್ಷರೂ ಮಜ್ಲಿಸುತ್ತಅ್ಲೀಮಿಯದ ಅಧ್ಯಕ್ಷರೂ ಆದ ಜನಾಬ್ ನುಸ್ರತ್ ಅಲಿಯವರು ಇಂದು ಮಧ್ಯಾಹ್ನ ನಿಧನರಾದರು. ಜನಾಬ್ ನುಸ್ರತ್ ಅಲಿಯವರು ತಮ್ಮ ಇಡೀ ಜೀವನವನ್ನು ಆಂದೋಲನಕ್ಕಾಗಿ ಮುಡಿಪಾಗಿಟ್ಟವರಲ್ಲಿ ಒಬ್ಬರಾಗಿದ್ದರು.
ಪಶ್ಚಿಮ ಯು.ಪಿ.ಯ ರೈತ ಕುಟುಂಬದಲ್ಲಿ ಜನಿಸಿದ್ದ ಅವರು ಬಾಲ್ಯದಲ್ಲಿಯೇ ಕುರ್ಆನ್ ಕಂಠಪಾಠದಲ್ಲಿ ಒಲವುಳ್ಳವರಾಗಿದ್ದರು. ಕುರ್ಆನಿನ ಬಹುತೇಕ ಅಧ್ಯಾಯಗಳನ್ನು ಅವರು ಕಂಠಪಾಠ ಮಾಡಿದ್ದರು. ಲೌಕಿಕವಾಗಿ ಎಂ.ಎ. ವ್ಯಾಸಂಗ ಪೂರ್ತಿಗೊಳಿಸಿದ ಅವರು ಕೆಲಕಾಲ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ದುಡಿದರು. ತರುವಾಯ ಆಂದೋಲನದ ಸೇವೆಯಲ್ಲಿ ತೊಡಗಿಕೊಂಡ ಮೇಲೆ ಹಿಂದಿರುಗಿ ನೋಡಲಿಲ್ಲ. ರಾಜ್ಯ ಮತ್ತು ಕೇಂದ್ರದ ಅನೇಕ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು. ಸಂಘಟನಾ ಚಾತುರ್ಯವಿದ್ದ ಕಾರಣ ಅವರು ಸಂಘಟನಾ ವಿಷಯಗಳಲ್ಲಿ ಜಮಾಅತ್ನ ತಜ್ಞರಲ್ಲಿ ಗಣಿಸಲ್ಪಡುತ್ತಿದ್ದರು. ಜಮಾಅತ್ನ ಸಂಘಟನಾ ವಿಭಾಗದ ಕಾರ್ಯದರ್ಶಿಯಾಗಿ, ಬಳಿಕ ಜಮಾಅತ್ನ ಕಾರ್ಯದರ್ಶಿಯಾಗಿ ಅವರು ಸಂಘಟನಾ ಕಾರ್ಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವರು.
ಜತೆಗೆ ಅವರು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಮತ್ತು ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸೆ ಮುಶಾವರತ್ನಲ್ಲಿಯೂ ಮಜಾಲಿಸೆ ಆಮಿಲದ ಸದಸ್ಯರಾಗಿದ್ದರು. ಜತೆಗೆ ಅನೇಕ ಸಾಮುದಾಯಿಕ ವೇದಿಕೆಗಳಲ್ಲಿ ಜಮಾಅತ್ನ ಪ್ರಾತಿನಿಧಿತ್ವ ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಅನುಭವವನ್ನು ಪರಿಗಣಿಸಿ ಅವರನ್ನು ಜಮಾಅತ್ನ ಪ್ರಸಕ್ತ ಮೀಕಾತ್ನಲ್ಲಿ ಕೇಂದ್ರೀಯ ಶಿಕ್ಷಣ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಅವರ ಸಾಧನೆಗಳು ಮತ್ತು ಪ್ರತಿಭೆಗಳನ್ನು ಎಣಿಕೆ ಮಾಡಲು ಹೋದರೆ ಪುಟಗಳೇ ಬೇಕಾಗುವುದು.
ಅವರ ನಿಧನಕ್ಕೆ ಸಂತಾಪ ಸೂಚಿಸಿದ ಜಮಾಅತೆ ಇಸ್ಲಾಮೀ ಹಿಂದ್ನ ಅಖಿಲ ಭಾರತ ಅಧ್ಯಕ್ಷರಾದ ಸಯ್ಯದ್ ಸಆದತುಲ್ಲಾಹ್ ಹುಸೈನಿಯವರು, “ಇಸ್ಲಾಮೀ ಆಂದೋಲನದ ಪ್ರಕಾಶಮಾನ ದೀಪವು ಇಂದು ಮಧ್ಯಾಹ್ನ ನಂದಿ ಹೋಯಿತು ಮತ್ತು ಕೊರೋನಾ ತಂದ ಅಂಧಕಾರವು ಇನ್ನೂ ಗಾಢವಾಯಿತು. ನುಸ್ರತ್ ಅಲಿಯವರ ಹೆಸರಿನ ಜೊತೆ ದಿವಂಗತ ಬರೆಯುವಾಗ ಬೆರಳುಗಳು ಕಂಪಿಸುತ್ತಿವೆ. ಆದರೆ ಅಲ್ಲಾಹನ ಇಚ್ಛೆ ಇದುವೇ ಆಗಿತ್ತು ಮತ್ತು ನಾವೆಲ್ಲರೂ ಅವನ ವಿಧಿಯನ್ನು ಅಂಗೀಕರಿಸುತ್ತೇವೆ. ಅಲ್ಲಾಹ್ ಮೃತರಿಗೆ ಭವ್ಯ ಸ್ವಾಗತ ಕೋರಲಿ ಮತ್ತು ಅವರ ಸೇವೆಗಳಿಗೆ ಮಹತ್ ಪ್ರತಿಫಲಗಳನ್ನು ದಯಪಾಲಿಸಲಿ ಮತ್ತು ಅವರನ್ನು ತನ್ನ ಕೃಪಾಶ್ರಯದಲ್ಲಿರಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕಾಧ್ಯಕ್ಷರಾದ ಡಾಕ್ಟರ್ ಬೆಳಗಾಮಿ ಮುಹಮ್ಮದ್ ಸಅದ್, ರಾಜ್ಯ ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಉಡುಪಿ ಮತ್ತು ಮುಹಮ್ಮದ್ ಕುಂಞಿ ಅಲ್ಲದೆ ಮಂಗಳುರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಯು., ಮಂಗಳೂರು ಶಾಖೆ ಅಧ್ಯಕ್ಷರಾದ ಕೆ.ಎಂ. ಅಶ್ರಫ್ ಮುಂತಾದವರು ನುಸ್ರತ್ ಅಲಿಯವರ ನಿಧನಕ್ಕೆ ಸಂತಾಪ ಸೂಚಿಸಿರುವರು.












