ಅಲ್-ಅನ್ಸಾರ್ ವಾರಪತ್ರಿಕೆಯ ಪ್ರಕಾಶಕ ಇಬ್ರಾಹೀಂ ಬಾವಾ ಹಾಜಿ ನಿಧನ

0
730

ಸನ್ಮಾರ್ಗ ವಾರ್ತೆ

ಮಂಗಳೂರು: ಲೇಖಕ, ಪ್ರಕಾಶಕರೂ ಆದ ಇಬ್ರಾಹೀಂ ಬಾವಾ ಹಾಜಿ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಅಲ್-ಅನ್ಸಾರ್ ವಾರಪತ್ರಿಕೆಯ ಪ್ರಕಾಶಕರೂ ಆಗಿದ್ದ ಇವರು, ಅನಾಥ ಮಕ್ಕಳ ಪರಿಪಾಲಕ ಕೂಡಾ ಆಗಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಂಗಳೂರಿನ ಬಂದರ್‌ನ ಕಂದಕ್‌ನಲ್ಲಿ ಬಿಎಂ ಅಹ್ಮದ್ ಹಾಜಿ ಮತ್ತು ಹಲೀಮಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ ಎಂ. ಇಬ್ರಾಹೀಂ ಬಾವಾ ಹಾಜಿ ಬಿಎಸ್ಸಿ ಪದವೀಧರ. ಮುಂಬೈಯಲ್ಲಿ ಪದವಿ ಮುಗಿಸಿದ ಬಳಿಕ ಅಲ್ಲಿನ ‘ಹಮ್‌ದರ್ದ್‌’ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ಊರಿಗೆ ಮರಳಿ ಅಡಿಕೆ ವ್ಯಾಪಾರ ಆರಂಭಿಸಿದರು. ನಂತರ ತನ್ನ ತಂದೆಯ ಒಣಮೀನು, ಗೋಣಿಚೀಲದ ವ್ಯಾಪಾರವನ್ನು ಸಹೋದರರ ಜೊತೆಗೂಡಿ ಮುನ್ನೆಡೆಸತೊಡಗಿದರು. ಬ್ಯಾರಿ, ಕನ್ನಡ, ತುಳು, ಹಿಂದಿ, ಇಂಗ್ಲಿಷ್, ಅರಬಿಕ್ ಸಹಿತ ಸುಮಾರು 18 ಭಾಷೆಗಳನ್ನು ಬಲ್ಲವರಾಗಿದ್ದರು.

ಅನಾಥ ಮಕ್ಕಳ ಮೇಲೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದ ಅವರು ಮಂಗಳೂರಿನ ಝೀನತ್ ಬಕ್ಸ್ ಯತೀಂ ಖಾನಾದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತೊಕ್ಕೊಟ್ಟು ಮಸ್ಕಿದ್ ತಾಜುಲ್ ಉಲಮಾದ ಅಧ್ಯಕ್ಷರಾಗಿ ರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಯಾವುದೇ ಪ್ರಚಾರವಿಲ್ಲದೆ ದಾನ ಧರ್ಮದ ಕೆಲಸಗಳನ್ನು ಮಾಡುತ್ತಿದ್ದರು. ಉಲಮಾಗಳು, ಮಸೀದಿ-ಮದ್ರಸದ ಸೇವಕರು, ಮದ್ರಸ, ದರ್ಸ್ ವಿದ್ಯಾರ್ಥಿಗಳ ಮೇಲೆ ಅಪಾರ ಗೌರವ ಹೊಂದಿದ್ದರು.

ವ್ಯಾಪಾರದ ಜೊತೆ ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದ ಅವರು 1990ರಲ್ಲಿ ದೇರಳಕಟ್ಟೆಯಲ್ಲಿ ಅಲ್ ಅನ್ಸಾರ್ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಅಲ್ಲದೆ ಸನಾಬಿಲ್ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು. ಬಳಿಕ ಮೊಯಿಲಾಂಜಿ ಮಾಸಿಕವನ್ನೂ ಹೊರತಂದಿದ್ದರು.