ಇಬ್ರಾಹಿಂ ಬಾವ ಹಾಜಿಯವರ ಒಂದಿಷ್ಟು ನೆನಪು: ಇಸ್ಮತ್ ಫಜೀರ್

0
1219

ನಿಮಗೆಲ್ಲಾ ಗೊತ್ತಿರುವಂತೆ ಕೆಲ ತಿಂಗಳುಗಳಿಂದೀಚೆಗೆ ನಾನು ತುಳುನಾಡಿನ ಪುರಾತನ ಮಸೀದಿಗಳ ಅಧ್ಯಯನ ನಡೆಸುತ್ತಾ ಬಂದಿದ್ದೆ. ಮಂಗಳೂರಿನ ಮುಸ್ಲಿಮ್ ಸಮುದಾಯ, ಅದರ ಇತಿಹಾಸ, ಇಲ್ಲಿನ ಮುಸ್ಲಿಮರ ಪರಂಪರೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಒಂದು ಅಥಾರಿಟಿ, ಒಂದು ವಿಧದ ಮೌಖಿಕ ಇತಿಹಾಸಕಾರನಂತಿದ್ದವರು ಮರ್ಹೂಂ ಹಾಜಿ ಹಮೀದ್ ಕಂದಕ್. ನಾನು ಅವರ ನಿಕಟ ಸಂಪರ್ಕಕ್ಕೆ ಬಂದು ಕೆಲ ತಿಂಗಳುಗಳ ಅಂತರದಲ್ಲೇ ಅವರು ಇದ್ದಕ್ಕಿದ್ದಂತೆಯೇ… ಅದೂ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದಂತೆಯೇ ಬದುಕಿನಿಂದ ನಿರ್ಗಮಿಸಿದ್ದರು. ನಾನಂತೂ ಅವರ ನಿರ್ಗಮನದಿಂದ ತೀವ್ರವಾಗಿ ಪರಿತಪಿಸಿದ್ದೆ.

ನಾನು ಉಳ್ಳಾಲ ದರ್ಗಾದ ಮಾಜಿ ಮೊಕ್ತೇಸರ /ಅಧ್ಯಕ್ಷ ಯು.ಎಂ.ಇಬ್ರಾಹಿಂ ಹಾಜಿಯವರ ಮರಿ ಮೊಮ್ಮಗನೆಂದು ಗೊತ್ತಾದ ಬಳಿಕವಂತೂ ಅವರು ನನ್ನ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ತೋರುತ್ತಿದ್ದರು. ಯಾವ ಹೊತ್ತಲ್ಲಿ ಕರೆ ಮಾಡಿದರೂ ಕರೆ ಸ್ವೀಕರಿಸಿ ನನ್ನ ಸಂಶಯಗಳಿಗೆ ಉತ್ತರ ನೀಡುತ್ತಿದ್ದರು. ಅವರ ಬಳಿಕ ಅಂತಹದ್ದೊಂದು ವ್ಯಕ್ತಿತ್ವ ಮಂಗಳೂರಿನಲ್ಲಿ ಇಲ್ಲವಲ್ಲಾ ಎಂದು ಹಿರಿಯ ಮಿತ್ರರಾದ ಡಿ.ಐ.ಅಬೂಬಕರ್ ಕೈರಂಗಳ ಅವರ ಬಳಿ ಹೇಳಿದಾಗ ” ಇಬ್ರಾಹಿಂ ಬಾವ ಹಾಜಾರರ ಸಂಪರ್ಕವಿಟ್ಕೊಳ್ಳಿ..ನಿಮ್ಮ ಅಧ್ಯಯನಗಳಿಗೆ ತುಂಬಾ ಪ್ರಯೋಜನವಾಗುತ್ತದೆ “ಎಂದಿದ್ದರು. ಸರಿ ಎಂದು ಅವರ ಫೋನ್ ನಂಬರ್ ಪಡ್ಕೊಂಡಿದ್ದೆ. ಏನೇ ಆಗಲಿ, ಮೊದಲು ಒಮ್ಮೆ ಭೇಟಿಯಾಗಿ ಮಾತನಾಡುವೆ..‌ಆ ಬಳಿಕ ಫೋನಲ್ಲಿ ಮಾತನಾಡುತ್ತಾ ವಿವಿಧ ಮಾಹಿತಿಗಳನ್ನು ಕಲೆ ಹಾಕೋಣ ಎಂದು ಯೋಚಿಸಿದ್ದೆ. ಅದಾಗಿ ಕೆಲ ದಿನಗಳಲ್ಲಿ ನಾನು ರಸ್ತೆ ಅಪಘಾತಕ್ಕೊಳಗಾಗಿ ಗೃಹಬಂಧಿಯಾಗಿ ಬಿಟ್ಟೆ. ಇನ್ನೇನಿದ್ದರೂ ರಮಝಾನ್ ಮುಗಿದು, ಕೊರೋನಾ ಸಂಕಟ ಮುಗಿದ ಬಳಿಕವೇ ಭೇಟಿ ಸಾಧ್ಯ ಎಂದು ಇತ್ತೀಚೆಗೊಮ್ಮೆ ಯೋಚಿಸಿದ್ದೆ. ಮೊನ್ನೆ ಕೆಲದಿನಗಳ ಹಿಂದೆ ಮಿತ್ರ ಡಿ.ಐ.ಅಬೂಬಕರ್ ವಾಟ್ಸಪ್ ಮೆಸೇಜ್ ಮೂಲಕ ಇಬ್ರಾಹಿಂ ಬಾವ ಹಾಜಾರರ ಆರೋಗ್ಯ ಹದಗೆಟ್ಟಿದೆ.‌ಅವರಿಗಾಗಿ ವಿಶೇಷವಾಗಿ ಪ್ರಾರ್ಥಿಸಿ ಎಂದಿದ್ದರು. ಅದಾಗ್ಯೂ ಅದು ಅವರು ವಿದಾಯ ಹೇಳುವಷ್ಟು ಗಂಭೀರ ಎಂದುಕೊಂಡಿರಲಿಲ್ಲ..ನಿನ್ನೆ ಇಫ್ತಾರ್‌ಗಿಂತ ತುಸು ಮುಂಚೆ ಮನೆಯ ಸ್ಲ್ಯಾಬಿನ ಮೇಲೆ ಕೂತು ಪುಸ್ತಕವೊಂದನ್ನು ಓದುತ್ತಿದ್ದಾಗ ಡಿ.ಐ.ಯವರು ಕಾಲ್ ಮಾಡಿ ಹಾಜಾರ್ ತೀರಿಕೊಂಡರು ಎಂದರು.

ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿವೂನ್.. ಇದು ಮುಸ್ಲಿಂ ಸಮುದಾಯಕ್ಕೆ ಅದರಲ್ಲೂ ಮಂಗಳೂರಿನ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ತುಂಬಲಾರದ ನಷ್ಟ. ನನ್ನ ಪ್ರಕಾರ ಅವರ ನಿರ್ಗಮನದೊಂದಿಗೆ ಮಂಗಳೂರಿನ ಮುಸ್ಲಿಮರ ಇತಿಹಾಸದ ದಾಖಲಾಗದ ಬಹು ದೊಡ್ಡ ಅಧ್ಯಾಯವೂ ನಿರ್ಗಮಿಸಿತು..

ಬದುಕಿನ ಬೆಳ್ಳಿ ಹಬ್ಬದ ಆಜು ಬಾಜಿನಲ್ಲಿದ್ದ ಅವರು ಅರ್ಧ ಶತಮಾನದ ಹಿಂದಿನ ಮಂಗಳೂರು ಮುಸ್ಲಿಮರಲ್ಲಿದ್ದ ಬೆರಳೆಣಿಕೆಯ ಪದವೀದರರಲ್ಲೊಬ್ಬರು. ಬಹು ಭಾಷಾ ಪ್ರವೀಣರು.ಡಿ.ಐ.ಅವರಂದಂತೆ ಹಾಜಾರರು ಬ್ಯಾರಿ, ತುಳು, ಕನ್ನಡ,ಮಲಯಾಳಂ , ಇಂಗ್ಲಿಷ್, ಹಿಂದಿ, ಉರ್ದು, ತಮಿಳು ಮತ್ತು ತೆಲುಗು ಹೀಗೆ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರೂ, ವ್ಯವಹರಿಸಬಲ್ಲವರೂ ಆಗಿದ್ದರು. ಅಪಾರ ಓದನ್ನು ರೂಡಿಸಿಕೊಂಡ ಅಪರೂಪದ ವಿದ್ವಾಂಸರಾಗಿದ್ದರು.‌ಅತ್ಯಂತ ಸಜ್ಜನ ಮುಸ್ಲಿಂ ಮುಖಂಡರಾಗಿದ್ದರು.ಕನ್ನಡ ಇಸ್ಲಾಮೀ ಪತ್ರಿಕೋದ್ಯಮದ ಒಂದು ಅವಿಭಾಜ್ಯ ಅಂಗವಾಗಿದ್ದರು. ತಾಜುಲ್ ಉಲಮಾರಿಂದ ಬೇಕಲ್ ಉಸ್ತಾದರವರೆಗೆ ಹತ್ತು ಹಲವು ಉಲಮಾ ಶಿರೋಮಣಿಗಳ ನಿಕಟವರ್ತಿಯಾಗಿದ್ದರು.

ಸುಮಾರು ಮೂರು ದಶಕದ ಹಿಂದೆ ಮರ್ಹೂಂ ಹಮೀದ್ ಕಂದಕ್ ಅವರ ಪ್ರಕಾಶಕತ್ವದಲ್ಲಿ,ಹಿರಿಯ ಸಾಹಿತಿ ಸಾಲೆತ್ತೂರು ಫೈಝಿಯವರ ಸಂಪಾದಕತ್ವದಲ್ಲಿ ಅಲ್- ಮುನೀರ್ ಪತ್ರಿಕೆ ಪ್ರಕಟವಾಗುತ್ತಿತ್ತು. ಅದರ ಭವಿಷ್ಯ ಡೋಲಾಯಮಾನವಾದಾಗ ಸಾಲೆತ್ತೂರು ಫೈಝಿಯವರನ್ನು ಬಳಸಿ ಕನ್ನಡದ ಇಸ್ಲಾಮೀ ಪತ್ರಿಕೋದ್ಯಮದಲ್ಲಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡಿದವರು ಇಬ್ರಾಹಿಂ ಬಾವಾ ಹಾಜಿ. ಆಗ ಕನ್ನಡದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದ ಏಕೈಕ ಇಸ್ಲಾಮಿಕ್ ಪತ್ರಿಕೆ ಸನ್ಮಾರ್ಗ ಮಾತ್ರ. ಅದಾಗಲೇ ಹಿರಿಯ ಸಾಹಿತಿ ಪ್ರೊ.ಬಿ.ಎಂ. ಇಚ್ಲಂಗೋಡು ಅವರ ತವನಿಧಿ, ಇನ್ನೋರ್ವ ಹಿರಿಯ ವಿದ್ವಾಂಸ ಡಾ.ಕೆ.ಎಂ.ಶಾಹ್ ಮುಸ್ಲಿಯಾರರ ಅಲಮುಲ್ ಹುದಾ, ಸರಳ ಪಥ, ಎಸ್ಸೆಸ್ಸೆಫಿನ ಅಲ್ ಮುನೀರ್ ಮುಂತಾದವುಗಳು ಬಂದು ಹೋಗಿದ್ದವು.ಕೆಲವು ವ್ಯಾಪಕವಾಗಿ ರೀಚ್ ಆಗುತ್ತಿರಲಿಲ್ಲ. ಆದುದರಿಂದ ಹಾಜಾರರ ಮಾಲಕತ್ವದಲ್ಲಿ ಬಂದ ಅಲ್- ಅನ್ಸಾರ್ ಹೊಸ ಭರವಸೆ ಮೂಡಿಸಿತ್ತು. ಆದರೆ ಅದು ಹಾಜಾರರ ಪಾಲಿಗೆ ಯಾವತ್ತೂ ಲಾಭದಾಯಕ ಉದ್ಯಮವಾಗಿರಲಿಲ್ಲ.‌ಅದರಿಂದ ಬಂದದ್ದು ಅದಕ್ಕೇ ಸರಿಯಾಗುತ್ತಿತ್ತು.. ಅದಾಗ್ಯೂ ಒಂದೇ ಒಂದು ಸಂಚಿಕೆ ಮಿಸ್ ಆಗದಂತೆ ಕಳೆದ ಮೂರು ದಶಕದಿಂದೀಚೆಗೆ ಪತ್ರಿಕೆಯನ್ನು ಹೊರತಂದಿದ್ದರು. ಹಾಜಾರರೂ ಆಗಾಗ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅವರಿಗೆ ಅಲ್ಲಾಮಾ ಇಕ್ಬಾಲರ ಉರ್ದು ಕಾವ್ಯದ ಕುರಿತಂತೆ ಅಪಾರ ಜ್ಞಾನ ಮತ್ತು ವಿಶಿಷ್ಟ ಆಸಕ್ತಿಯಿತ್ತು. ಅಲ್ ಅನ್ಸಾರ್ ಮೂಲಕ ಅವರು ಅದನ್ನು ಕನ್ನಡದ ಓದುಗರಿಗೆ ಉಣಬಡಿಸುತ್ತಿದ್ದರು.. ಅವಲ್ಲದೇ ಉರ್ದು ಸಾಹಿತ್ಯದ ಕುರಿತಂತೆ ಆಳವಾದ ಜ್ಞಾನ ಅವರಿಗಿತ್ತು. ಅವರು ಸ್ವಯಂ ಬರೆಯುತ್ತಿದ್ದರೂ ಅವರ ಬರವಣಿಗೆಯ ಶೈಲಿ ಅಷ್ಟು ಪರಿಣಾಮಕಾರಿಯಲ್ಲವಾದುದರಿಂದ ಕೆಲವೊಮ್ಮೆ ಸಾಲೆತ್ತೂರು ಫೈಝಿ, ಕೆ.ಎಂ.ಸಿದ್ದೀಕ್ ಮೋಂಟುಗೋಳಿಯವರು ಅವರ ವಿಚಾರಗಳಿಗೆ ಸರಿಯಾದ ರೂಪ ಕೊಡುತ್ತಿದ್ದರು…

ಪ್ರವಾದಿವರ್ಯರ ಕುರಿತಂತೆ ಉರ್ದು ಕವಿಗಳ ” ನ‌ಅತೇ ಶರೀಫ್” ಬಗ್ಗೆ ಹಾಜಾರರಿಗೆ ಬಹಳ ಒಲವಿತ್ತು. ಅವರು ಬಿಡುವಿನ ವೇಳೆಯಲ್ಲಿ ನ‌ಅತ್ ಗುನುಗುತ್ತಿದ್ದರೆಂದು ಡಿ.ಐ.ಹೇಳುತ್ತಿದ್ದರು. ತನ್ನ ಮರಣದವರೆಗೂ ಮಂಗಳೂರಿನ ಪ್ರಸಿದ್ಧ ಝೀನತ್ ಬಕ್ಷ ಯತೀಂ ಖಾನಾ ಎಂಬ ಅನಾಥಾಶ್ರಮದ ಅಧ್ಯಕ್ಷನಾಗಿದ್ದ ಹಾಜಾರ್ ಸಹಸ್ರಾರರು ಅನಾಥ ಮಕ್ಕಳಿಗೆ ಬದುಕು ಕೊಟ್ಟ, ಅವರ ಭವಿಷ್ಯ ರೂಪಿಸಿದ ಜೀವ ಕಾರುಣ್ಯ ಕಾರ್ಯಕರ್ತರಾಗಿದ್ದರು.

ಮಂಗಳೂರಿನ ಕುತ್ತಾರ್ ಪದವಿನಲ್ಲಿ ಅಲ್- ಅನ್ಸಾರ್ ಕಚೇರಿಗೆ ಅಟ್ಯಾಚ್ ಆಗಿರುವ ಪುಸ್ತಕದಂಗಡಿಯಲ್ಲಿರುವ ಅಪರೂಪದ ಗ್ರಂಥ ಸಂಗ್ರಹ ಹಾಜಾರರ ಸಾಹಿತ್ಯಾಭಿರುಚಿಗೆ ಹಿಡಿದ ಕೈ ಗನ್ನಡಿಯಾಗಿತ್ತು. ಅದು ಇಸ್ಲಾಮಿಕ್ ಸಾಹಿತ್ಯದ ಜೊತೆ ಜೊತೆಗೆ ಇತರ ಸಾಹಿತ್ಯ ಕೃತಿಗಳೊಂದಿಗೆ ಸಮೃದ್ಧವಾಗಿದೆ.

ಒಟ್ಟಿನಲ್ಲಿ ಕನ್ನಡದ ಇಸ್ಲಾಮಿಕ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಹಿನ್ನೆಲೆಯಲ್ಲಿ ನಿಂತು ಒಂದು ತಲೆಮಾರನ್ನೇ ರೂಪಿಸಿದ ಅಪರೂಪದ ವ್ಯಕ್ತಿತ್ವ ಇಬ್ರಾಹಿಂ ಬಾವಾ ಹಾಜಾರರದ್ದು. ನನಗೆ ಈಗಲೂ ಅನಿಸುವುದು ಅವರ ಜ್ಞಾನವನ್ನು ಬಳಸಿಕೊಳ್ಳಬೇಕಾದಷ್ಟು ಮಂಗಳೂರಿನ ಮುಸ್ಲಿಂ ಸಮುದಾಯ ಬಳಸಿಕೊಂಡಿಲ್ಲ. ಹಾಜಾರರು ತನ್ನ ಜವಾಬ್ದಾರಿಗಳನ್ನು ಸಮರ್ಪಕವಾಗಿ ಮುಗಿಸಿ ನಿರ್ಗಮಿಸಿದ್ದಾರೆ. ಅಲ್ಲಾಹನು ಅವರಿಗೆ ಮಗ್‌ಫಿರತ್ ನೀಡಲಿ…