ನಾವು ಬದುಕಬೇಕು: ಜನಾಗ್ರಹ ಚಳುವಳಿ ವೆಲ್ಫೇರ್ ಪಾರ್ಟಿ ಬೆಂಬಲ
ಬೆಂಗಳೂರು : ಕೋವಿಡ್ ಸಂಕ್ರಮಣ ಕಾಲವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿವೆ. ಜನ ವಿರೋಧಿ ನಿಯಮಗಳನ್ನು ಜಾರಿಗೆ ತಂದಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಜನಾಗ್ರಹ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ನಾವು ಬದುಕಬೇಕು ಎನ್ನುವ ನಿಟ್ಟಿನಲ್ಲಿ ಮೇ 24ಕ್ಕೆ ರಾಜ್ಯವ್ಯಾಪಿ ಪಕ್ಷಾತೀವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ತಿಳಿಸಿದ್ದಾರೆ.
ಸೋಂಕಿನಿಂದ ಬಳಲುತ್ತಿರುವ ಎಲ್ಲರಿಗೂ ಸರ್ಕಾರ ಉಚಿತ ಚಿಕಿತ್ಸೆ ಕೊಡಬೇಕು. ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಲಸಿಕೆ ಹಾಕಬೇಕು. ಸರ್ಕಾರ ನೆಪಮಾತ್ರಕ್ಕೆ ಜನರಿಗೆ ಕಣ್ಣೊರೆಸುವ ತಂತ್ರ ಮಾಡಿ ಕೇವಲ 2000 – 3000 ರೂಪಾಯಿಗಳನ್ನು ಘೋಷಣೆ ಮಾಡಿದ್ದು ವಿಪರ್ಯಾಸ. ಕಳೆದ ವರ್ಷ ಘೋಷಣೆ ಮಾಡಿದ ಹಣವೇ ಇನ್ನೂ ಸರಿಯಾಗಿ ತಲುಪಿಲ್ಲ. ಕಾಟಾಚಾರದ ಘೋಷಣೆ ಮಾಡಿರುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಎಲ್ಲರಿಗೆ ಸ್ಪಷ್ಟವಾಗಿ ಯೋಜನೆ ರೂಪಿಸಬೇಕು.
ಗ್ರಾಮೀಣ ಮಟ್ಟಕ್ಕೆ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಗ್ರಾಮಪಂಚಾಯತಿ ಮಟ್ಟದಲ್ಲಿ ಆರಂಭಮಾಡಿ ಜನರ ಆರೋಗ್ಯದ ಕಾಳಜಿ ಮಾಡಬೇಕು. ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಲವು ತಿಂಗಳುಗಳಿಂದ ಸಂಬಳವಿಲ್ಲದೆ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಸಂಕಷ್ಟದಲ್ಲಿದ್ದಾರೆ ನ್ಯಾಯವಾದಿಗಳು, ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಅವರವರ ಸಮಸ್ಯೆಗಳನ್ನರಿತು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಈಗಾಗಲೇ ಘೋಷಣೆ ಮಾಡಿರುವ ಅಲ್ಪಮೊತ್ತದ ಪ್ಯಾಕೇಜ್ ಅವೈಜ್ಞಾನಿಕವಾಗಿದೆ. 2000- 3000 ರೂಪಾಯಿಯಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯ.
ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಮೇ 24 ರಂದು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಇದಕ್ಕೆ ಬೆಂಬಲ ನೀಡಲು ಜನರು ತಮ್ಮ ತಮ್ಮ ಮನೆಗಳಲ್ಲಿ ಅಥವಾ ಆಯಕಟ್ಟಿನ ಸ್ಥಳಗಳಲ್ಲಿ ಜಮಾಯಿಸಿ ಖಾಲಿ ತಟ್ಟೆ ಹಾಗೂ ಖಾಲಿ ಚೀಲದೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಹೀರ್ ಹುಸೇನ್ ಕರೆ ನೀಡಿದ್ದಾರೆ.












