ದೀದಿ ಇಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ: ತೃಣಮೂಲ ತೊರೆದು ಬಿಜೆಪಿ ಸೇರಿದ್ದ ಸೋನಾಲಿ ಗುಹಾ

0
847

ಸನ್ಮಾರ್ಗ ವಾರ್ತೆ

ಕೋಲ್ಕತಾ: ಇತ್ತೀಚಿಗೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಾನು ಪ್ರತಿನಿಧಿಸಿದ್ದ ಸತ್ಗಚಿಯಾ ಕ್ಷೇತ್ರದಲ್ಲಿ ಟಿಕೆಟ್ ನೀಡದ್ದಕ್ಕೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕಿ ಸೋನಾಲಿ ಗುಹಾ, ದೀದಿ ನೀವಿಲ್ಲದೆ ಬದುಕಲು ಸಾಧ್ಯವಾಗುತ್ತಿಲ್ಲ. ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಮರಳಿ ಪಕ್ಷಕ್ಕೆ ಸೇರಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ಕುರಿತು ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರುವ ಅವರು, “ನಾನು ಇದನ್ನು ಭಾವುಕ ಹೃದಯದಿಂದ ಬರೆಯುತ್ತಿದ್ದೇನೆ, ಭಾವನಾತ್ಮಕವಾದ ನಂತರ ನಾನು ಬೇರೆ ಪಕ್ಷಕ್ಕೆ ಸೇರುವ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅಲ್ಲಿ ನನಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ನನಗೆ ಕ್ಷಮೆ ನೀಡಿ ಪಕ್ಷಕ್ಕೆ ಸೇರಲು ಅವಕಾಶ ನೀಡಿ’ ಎಂದು ಮಾಜಿ ಶಾಸಕಿ ಸೋನಾಲಿ ಗುಹಾ ಬರೆದಿದ್ದಾರೆ.

“ಒಂದು ಮೀನಿಗೆ ನೀರಿನಿಂದ ಹೊರಗುಳಿಯಲು ಹೇಗೆ ಸಾಧ್ಯವಿಲ್ಲವೋ, ಹಾಗೇ ನಿಮ್ಮ ಜೊತೆ ಇಲ್ಲದೆ ಬದುಕಲು ನನಗೆ ಸಾಧ್ಯವಾಗುವುತ್ತಿಲ್ಲ. ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ ಮತ್ತು ನೀವು ನನ್ನನ್ನು ಕ್ಷಮಿಸದಿದ್ದರೆ, ನಾನು ಬದುಕಲು ಸಾಧ್ಯವಾಗಲಿಕ್ಕಿಲ್ಲ. ದಯವಿಟ್ಟು ನನಗೆ ಅನುಮತಿ ನೀಡಿ ಜೀವನದ ಉಳಿದ ಭಾಗವನ್ನು ನಿಮ್ಮ ವಾತ್ಸಲ್ಯದಲ್ಲಿ ಕಳೆಯಲು ಅವಕಾಶ ನೀಡಿರಿ “ಎಂದು ಅವರು ಬಂಗಾಳಿ ಭಾಷೆಯಲ್ಲಿ ಬರೆದಿದ್ದಾರೆ.

24 ಪರಗಣ ಜಿಲ್ಲೆಯ ಸತ್ಗಚಿಯಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಸೋನಾಲಿ ಗುಹಾ, ಮುಖ್ಯಮಂತ್ರಿಯವರ ರೈಟ್ ಹ್ಯಾಂಡ್ ಎಂದೇ ಎಂದು ಪರಿಗಣಿಸಲ್ಪಟ್ಟಿದ್ದರು. ಅಲ್ಲದೆ, ಪಶ್ಚಿಮ ಬಂಗಾಳದ ವಿಧಾನಸಭೆಯ ಮೊದಲ ಮಹಿಳಾ ಡೆಪ್ಯುಟಿ ಸ್ಪೀಕರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡದ್ದಕ್ಕೆ ಬಿಜೆಪಿ ಸೇರಿದ್ದರು.