ಕೇರಳ: ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ನ ವಿ. ಡಿ. ಸತೀಶನ್ ಆಯ್ಕೆ

0
578

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ವಾರಗಳ ನಂತರ, ಕಾಂಗ್ರೆಸ್ ನ ಹೈಕಮಾಂಡ್ ಇಂದು ವಿ.ಡಿ. ಸತೀಶನ್ ಅವರನ್ನು ವಿರೋಧ ಪಕ್ಷದ ಹೊಸ ನಾಯಕನಾಗಿ ಆಯ್ಕೆ ಮಾಡಿದೆ.

56 ವರ್ಷದ ನಾಯಕನನ್ನು ಹುದ್ದೆಗೆ ಆಯ್ಕೆ ಮಾಡುವ ಪಕ್ಷದ ಹೈಕಮಾಂಡ್ ನಿರ್ಧಾರವು ರಾಜ್ಯದೊಳಗಿನ ರಾಜಕೀಯ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಬದಲಾವಣೆಯನ್ನು ತರಬಹುದೆಂದು ಅಂದಾಜಿಸಲಾಗಿದೆ. ಈ ಹಿಂದೆ ರಮೇಶ್ ಚೆನ್ನಿತ್ತಲಾರವರು ವಿಪಕ್ಷ ನಾಯಕರಾಗಿದ್ದರು. ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಚೆನ್ನಿತ್ತಲಾರವರು ಈ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದರು.

ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಅವರ ಬಣದ ಅನೇಕರು ರಮೇಶ್ ಚೆನ್ನಿತ್ತಲಾರವರನ್ನು ವಿರೋಧ ಪಕ್ಷದ ನಾಯಕರಾಗಿ ಮುಂದುವರಿಸಲು ಬೆಂಬಲಿಸಿದ್ದರು. ಆದರೆ ಹೈಕಮಾಂಡ್ ನಿರ್ಧಾರವನ್ನು ಉಮ್ಮನ್ ಚಾಂಡಿ ಇಂದು ಸ್ವಾಗತಿಸಿದ್ದಾರೆ. ವಿಡಿ ಸತೀಶನ್ ಐದು ಬಾರಿ ಶಾಸಕರಾಗಿದ್ದು, 1996 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ವಿ.ಡಿ. ಸತೀಸನ್ , ಇದುವರೆಗೆ ಕೇವಲ ಒಂದು ಬಾರಿ ಮಾತ್ರ ಸೋತಿದ್ದಾರೆ.

ಈ ನಿರ್ಧಾರವು ಮುಂದಿನ ದಿನಗಳಲ್ಲಿ ಸಾಂಸ್ಥಿಕ ಬದಲಾವಣೆಗಳಿಗೆ ಮುನ್ಸೂಚನೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಬಾರಿಯ ಚುನಾವಣೆಯಲ್ಲಿ 140 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್ ಡಿ ಎಫ್ ಮೈತ್ರಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 41 ಸ್ಥಾನಗಳನ್ನು ಪಡೆದುಕೊಂಡಿದೆ ಮತ್ತು ಬಿಜೆಪಿ ಕೇರಳದಲ್ಲಿ ಇದ್ದ ಒಂದು ಖಾತೆಯನ್ನು ಕೂಡ ಕಳೆದುಕೊಂಡು ಶೂನ್ಯ ಸಾಧನೆ ಮಾಡಿತ್ತು.