ಬದುಕಿಗೆ ವಿದಾಯ ಹೇಳಿದ ದೊರೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ H.S. ದೊರೆಸ್ವಾಮಿ ಇನ್ನಿಲ್ಲ

0
638

ಸನ್ಮಾರ್ಗ ವಾರ್ತೆ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ H.S. ದೊರೆಸ್ವಾಮಿ(104) ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೊರೆಸ್ವಾಮಿ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಕೊರೊನಾದಿಂದ ಗುಣಮುಖರಾದ 4 ದಿನದ ಬಳಿಕ ದೊರೆಸ್ವಾಮಿ ಅವರಿಗೆ ಮತ್ತೆ ಉಸಿರಾಟದ ತೊಂದರೆ ಎದುರಾಗಿತ್ತು. ಹಿನ್ನೆಲೆಯಲ್ಲಿ 8 ದಿನದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಮತ್ತೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ನನಗೆ ವಯಸ್ಸಾಗಿದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಬೇಡಿ.‌ ಕೋವಿಡ್ ನಿಂದ ಬಳಲುತ್ತಿರುವ ಯುವಕರಿಗೆ ನನ್ನ ಬೆಡ್ ಉಪಯೋಗಿಸಿ‌ ಅಂತ ಈ ಹಿಂದೆ ಹೇಳಿದ್ದರು. ಈ ವೇಳೆ ಜಯದೇವ ವೈದ್ಯ ಡಾ ಮಂಜುನಾಥ್ ಅವರು, ಬೆಡ್ ಕೊರತೆ ಇಲ್ಲ ಅಂತ ಮನವೊಲಿಸಿ ಮತ್ತೆ ಉಸಿರಾಟದ ತೊಂದರೆ ಬಂದಾಗ ಆಸ್ಪತ್ರೆಗೆ ದಾಖಲು ಮಾಡಿದ್ದರು‌.

ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡು ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ದೊರೆಸ್ವಾಮಿ ಯವರು, ಸರಳ ವ್ಯಕ್ತಿತ್ವವನ್ನು ಹೊಂದಿದ್ದರು. ‌

ದೊರೆಸ್ವಾಮಿ ಯವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ಗಣ್ಯರು ಸಂತಾಪ ಸೂಚಿಸಿ, ಕಂಬನಿ‌ ಮಿಡಿದಿದ್ದಾರೆ.