ಸನ್ಮಾರ್ಗ ವಾರ್ತೆ
ಭೋಪಾಲ: ಮಧ್ಯಪ್ರದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ಮೇ ತಿಂಗಳಲ್ಲಿ ರಹಸ್ಯವಾಗಿ ಕೊರೋ ನ ಮಾನದಂಡಗಳನ್ನು ಉಲ್ಲಂಘಿಸಿ ನಡೆಸಲಾಗಿರುವ ಮದುವೆಗಳು ಕಾನೂನು ಬಾಹಿರವೆಂದು ಜಿಲ್ಲಾಡಳಿತ ಘೋಷಿಸಿದ್ದು, ವಧುವರರಿಗೆ ಮದುವೆ ಸರ್ಟಿಫಿಕೆಟ್ ನೀಡಲು ನಿರಾಕರಿಸಿದೆ.
ಕೊರೊನ ಹರಡುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಮೇ ತಿಂಗಳಲ್ಲಿ ಮದುವೆಗಳಿಗೆ ನಿಷೇಧ ಹೇರಲಾಗಿತ್ತು. ಈ ವೇಳೆ ರಾಜ್ಯದಲ್ಲಿ 130 ಮದುವೆ ನಡೆಯಿತು. ಹೀಗೆ ಕೋವಿಡ್ ಪ್ರೊಟೋಕಾಲ್ ಉಲ್ಲಂಘಿಸಿದ 30 ಮಂದಿಯ ವಿರುದ್ಧ ಕಳೆದ 25 ದಿನಗಳಲ್ಲಿ ಅಧಿಕಾರಿಗಳು ಕೇಸು ಜಡಿದಿದ್ದಾರೆ.
ಮದುವೆ ವೇದಿಕೆಗಳು ಕೊರೋನ ಹರಡುವ ಕೇಂದ್ರಗಳಾಗುತ್ತಿರುವುದರ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳದಂತೆ ತೀರ್ಮಾನಿಸಿತ್ತು. ಆದರೆ ಸರಕಾರದ ಆದೇಶಕ್ಕೆ ಬೆಲೆ ಕೊಡದೆ ಕೆಲವರು ಗುಟ್ಟಾಗಿ ಮದುವೆ ನಡೆಸಿದ್ದಾರೆ. ಇಂತಹ ಮದುವೆಗಳಿಗೆ ಕಾನೂನಿನ ಬಲವಿರುವುದಿಲ್ಲ. ಮದುವೆ ಸರ್ಟಿಫಿಕೆಟ್ ಸಿಗುವುದಿಲ್ಲ. ಅಸಿಂಧು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಧ್ಯಪ್ರದೇಶದಿಂದ ಹೊರಗೆ ಹೋಗಿ ಉತ್ತರ ಪ್ರದೇಶದಲ್ಲಿ ಕೆಲವರು ಮದುವೆ ಮಾಡಿಕೊಂಡಿದ್ದಾರೆ. ಇದು ಈ ಆದೇಶಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












