ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದಿಲ್ಲಿಯ ಕೋಮು ಗಲಭೆಯಲ್ಲಿ ಕೋರ್ಟು ಸೂಚಿಸಿದರೂ ಎಫ್‍ಐಆರ್ ದಾಖಲಿಸದ ದಿಲ್ಲಿ ಪೊಲೀಸರನ್ನು ದಿಲ್ಲಿಯ ಕೋರ್ಟು ತರಾಟೆಗೆತ್ತಿಕೊಂಡಿದೆ. ಶಿವ್ ವಿಹಾರದ ಮದೀನಾ ಮಸೀದಿಯ ಧ್ವಂಸಕ್ಕೆ ಸಂಬಂಧಿಸಿದ ಕೇಸಿನಲ್ಲಿ ತನಿಖೆಗೆ ಆಸಕ್ತಿ ತೋರಿಸದ ದಿಲ್ಲಿ ಪೊಲೀಸರ ಕ್ರಮ ನೋವು ತರಿಸುವಂತಹದ್ದೆಂದು ಕೋರ್ಟು ಹೇಳಿತು. ಮಸೀದಿ ಧ್ವಂಸಗೊಳಿಸುವ ಯತ್ನಕ್ಕೆ ಸಂಬಂಧಿಸಿ ಪ್ರತ್ಯೇಕ ಎಫ್‍ಐಆರ್ ದಾಖಲಿಸದ್ದು ತನಿಖಾ ತಂಡದ ಹೃದಯ ಶೂನ್ಯತೆಯನ್ನು ತೋರಿಸುತ್ತಿದೆ ಎಂದು ಅಡಿಶನಲ್ ಸೆಶನ್ ಜಡ್ಜ್ ವಿನೋದ್ ಯಾದವ್ ಹೇಳಿದರು.
ಫೆಬ್ರುವರಿ 25ಕ್ಕೆ ಶಿವ್ ವಿಹಾರ ಪ್ರದೇಶದ ವಿದ್ಯುತ್ ಕಡಿತ ಮಾಡಿ ಎಲ್‍ಪಿಜಿ ಸಿಲಿಂಡರ್ ಉಪಯೋಗಿಸಿ ಮಸೀದಿಗೆ ಬೆಂಕಿ ಹಚ್ಚಲಾಗಿತ್ತು. ಮಸೀದಿಯ ತುದಿಯಲ್ಲಿ ಕೇಸರಿ ಬಾವುಟ ನಾಟಲಾಗಿತ್ತು. ಆರೋಪಿಗಳಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಎಫ್‍ಐಆರ್ ದಾಖಲಿಸುವ ಬದಲು ಪೊಲೀಸರು ಒಂದೇ ಎಫ್‍ಐಆರ್ ಅನ್ನು ದಾಖಲಿಸಿಕೊಂಡಿದ್ದಾರೆ. ಆದರೆ 2021 ಫೆಬ್ರುವರಿ ಒಂದಕ್ಕೆ ಪ್ರಕರಣ ಪರಿಗಣಿಸುವ ವೇಳೆ ಮದೀನಾ ಮಸೀದಿ ನಾಶಪಡಿಸಿದ ಬಗ್ಗೆ ಬೇರೆಯೇ ಎಫ್‍ಐಆರ್ ದಾಖಲಿಸಬೇಕೆಂದು ಕೋರ್ಟು ಆದೇಶ ನೀಡಿತ್ತು. ಅದರೆ ಪೊಲೀಸರು ಸೂಕ್ತ ಕ್ರಮಕೈಗೊಂಡಿಲ್ಲ. ಈ ಹಿಂದೆಯೂ ನ್ಯಾಯಾಲತ ಕೇಸು ಪರಿಗಣಿಸುವ ಸಮಯದಲ್ಲಿ ಪೊಲೀಸರನ್ನು ಕಟುವಾಗಿ ಟೀಕಿಸಿತ್ತು.
ಈ ನಡುವೆ ಗಲಭೆಗೆ ಬಂದ ಆರೋಪಿಗಳಿಗೆ ಅನುಕೂಲವಾಗುವಂತೆ ಪೊಲೀಸರು ದುರ್ಬಲ ಎಫ್‍ಐಆರ್ ದಾಖಲಿಸಿದ್ದಾರೆ. ಆದುದರಿಂದ ಆರೋಪಿಗಳಲ್ಲಿ ಒಬ್ಬರನ್ನು ವಿಚಾರಣಾ ಕೋರ್ಟು ಆರೋಪ ಮುಕ್ತಗೊಳಿಸಿತ್ತು. ದಿಲ್ಲಿಯ ಕೋಮು ಗಲಭೆಯಲ್ಲಿ ತೀರ್ಪು ನೀಡಿದ ಮೊದಲ ಪ್ರಕರಣ ಇದು. ಆರೋಪಿಯ ವಿರುದ್ಧ ನೇರ ಸಾಕ್ಷ್ಯಗಳಿಲ್ಲ, ಸಾಕ್ಷಿಗಳ ವಿರುದ್ಧ ತದ್ವಿರುದ್ಧವಾಗಿದೆ ಎಂದು ಸುರೇಶ್ ಎಂಬ ವ್ಯಕ್ತಿಯನ್ನು ಕೋರ್ಟು ಆರೋಪದಿಂದ ಖುಲಾಸೆಗೊಳಿಸಿದೆ.












