ಸನ್ಮಾರ್ಗ ವಾರ್ತೆ
ಬೆಂಗಳೂರು,ಜು.23: ರಾಜ್ಯದಲ್ಲಿ ಕೊರೋನ ಹರಡುವಿಕೆ ತಗ್ಗಿದ್ದು ಈ ಸ್ಥಿತಿಯಲ್ಲಿ ಶಾಲೆಗಳನ್ನು ಹಂತಹಂತವಾಗಿ ತೆರೆದು ತರಗತಿ ಆರಂಭಿಸುವ ಚಿಂತನೆ ಸರಕಾರ ನಡೆಸುತ್ತಿದೆ. ಕೊರೋನ ವ್ಯಾಪಿಸುವುದು ಕಡಿಮೆಯಾಗಿದ್ದ ಶಾಲೆಗಳನ್ನು ತೆರೆಯಬಹುದೆಂದು ಐಸಿಎಂಆರ್ ಸೂಚಿಸಿತ್ತು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಆಗಸ್ಟ್ ತಿಂಗಳಲ್ಲಿ ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ರೂಪೀಕರಿಸಿದ ವಿಶೇಷ ಸಮಿತಿಯ ವರದಿಯು ಸಿಕ್ಕಿದ ಮೇಲೆ ಇದರ ಕುರಿತು ಅಂತಿಮ ತೀರ್ಮಾನವಾಗಲಿದೆ. ಮೂರು ದಿನಗಳಲ್ಲಿ ಈ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.
ಮೊದಲ ಹಂತದಲ್ಲಿ ಎಂಟನೆಯ ತರಗತಿಯ ಮೇಲ್ಪಟ್ಟ ತರಗತಿಗಳಿಗೆ ಆರಂಭ ನೀಡುವ ಕುರಿತು ವರದಿಯಲ್ಲಿ ವಿವರ ಇರುತ್ತದೆ ಎನ್ನಲಾಗಿದೆ. ನೇರವಾಗಿ ಶಾಲೆಗೆ ಬರದೆ ಆನ್ಲೈನ್ ತರಗತಿ ಸಾಕೆನ್ನುವವರಿಗೆ ಅದಕ್ಕೂ ಅವಕಾಶ ನೀಡಲಾಗುವುದು. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ, ಖಾಸಗಿ ಶಾಲಾಡಳಿತ ಮತ್ತು ತಜ್ಞರಿಂದ ಸಮಿತಿ ಅಭಿಪ್ರಾಯ, ಸೂಚನೆಗಳನ್ನು ಕೇಳಿದೆ. ಶಾಲೆಗಳನ್ನು ತೆರೆಯುವ ಬಗ್ಗೆ ಪೂರಕ ಅಭಿಪ್ರಾಯ ಸಮಿತಿಗೆ ಇವರಿಂದ ಸಿಕ್ಕಿದೆ.
ಸರಕಾರದ ಸೂಚನೆ ಸಿಕ್ಕಿದ ಕೂಡಲೇ ಶಾಲೆಗಳನ್ನು ತೆರೆಯಲು ಸಿದ್ಧವೆಂದು ಖಾಸಗಿ ಶಾಲೆಯವರು ತಿಳಿಸಿದ್ದಾರೆ. ದೊಡ್ಡ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ತರಗತಿಗಳನ್ನು ಆರಂಭಿಸಲು ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಅದರಂತೆ ಶಾಲೆಗಳನ್ನು ತೆರೆಯುವ ಮೊದಲು ಅಧ್ಯಾಪಕರು, ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡುವ ಕಾರ್ಯ ಸಂಪೂರ್ಣ ಪೂರ್ಣಗೊಂಡಿರಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.
ಕಾಲೇಜು ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ವ್ಯಾಕ್ಸಿನ್ ಕೊಡುವುದಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಮತ್ತು ಶಾಲಾ ಅಧ್ಯಾಪಕರಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ಡಾ. ಕೆ. ಸುಧಾಕರ್ ಹೇಳಿದರು.
ರಾಜ್ಯದಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಲ್ಲಿ ಭಾಗವಹಿಸುವ ಸೌಕರ್ಯಗಳಿಲ್ಲ ಎಂದು ಲೆಕ್ಕಾಚಾರವಾಗಿದೆ. ಇನ್ನೂ ತಡಮಾಡಿ ಶಾಲೆ ಆರಂಭಿಸಿದರೆ ಇವರ ಕಲಿಕೆ ನನೆಗುದಿಗೆ ಬೀಳಲಿದೆ. ಗ್ರಾಮ ಭಾಗದಲ್ಲಿ ಶಿಕ್ಷಣ ಮೊಟಕುಗೊಳಿಸಿದ ಮಕ್ಕಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಕೊರೋನ ಮಾನದಂಡವನ್ನು ಪಾಲಿಸಿ ಶಾಲೆಗಳನ್ನು ತೆರೆಯಬೇಕೆಂದು ವಿವಿಧ ಭಾಗಗಳಿಂದ ಸೂಚನೆ ಲಭಿಸುತ್ತಿದೆ.












