ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.24: ರಾಷ್ಟ್ರೀಯ ಸುರಕ್ಷಾ ಕಾನೂನು (ಎನ್ಎಸ್ಎ) ವ್ಯಾಪ್ತಿಗೆ ಸೇರುವ ಪ್ರಕರಣಗಳಲ್ಲಿ ಯಾರನ್ನೂ ಬಂಧಿಸಲು ದಿಲ್ಲಿ ಪೊಲೀಸರಿಗೆ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ನೀಡಿದರು. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೊರಡಿಸಿದ ಪ್ರಕಟಣೆ ಜುಲೈ 19ರಿಂದ ಜಾರಿಗೆ ಬಂದಿದೆ.
ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂತಹ ಪ್ರಧಾನ ಆಚರಣೆಗಳಿಗೆ ಪೂರ್ವಭಾವಿಯಾಗಿ ಹೊರಡಿಸುವ ಆದೇಶ ಇದಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಜಂತರ್ ಮಂತರ್ನಲ್ಲಿ ನಡೆಯುವ ರೈತ ಪ್ರತಿಭಟನೆಯು ಹೊಸ ಕ್ರಮಕ್ಕೂ ಸಂಬಂಧ ಇಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಅಕ್ಟೋಬರ್ 18ರವರೆಗೆ ಪೊಲೀಸ್ ಕಮಿಷನರಿಗೆ ಯಾರನ್ನೂ ಕಸ್ಟಡಿಗೆ ತೆಗೆದುಕೊಳ್ಳುವ ಅಧಿಕಾರ ಈ ಆದೇಶದ ಮೂಲಕ ದೊರಕಿದೆ. ಇದೇ ವೇಳೆ ಕೊರೋನದಿಂದ ಮೃತಪಟ್ಟಿದ್ದ ಬಿಜೆಪಿ ನಾಯಕನ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ರಾಷ್ಟ್ರೀಯ ಸುರಕ್ಷಾ ಕಾನೂನಡಿಯಲ್ಲಿ ಬಂಧಿಸಲಾಗಿದ್ದ ಮಣಿಪುರದ ಪತ್ರಕರ್ತ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಮಣಿಪುರ ಹೈಕೋರ್ಟಿನ ಆದೇಶದಡಿಯಲ್ಲಿ ಕಳೆದ ಮೇ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ಪತ್ರಕರ್ತನನ್ನು ಬಿಡುಗಡೆಗೊಳಿಸಲಾಗಿದೆ.












