ಜೆ.ಎನ್‍.ಯು‌ನಲ್ಲಿ ಎ.ಬಿ.ವಿ.ಪಿ ಗೂಂಡಾಗಳಿಂದ ದಾಳಿ: ಇದುವರೆಗೆ ಒಬ್ಬರನ್ನೂ ಬಂಧಿಸಿಲ್ಲ ಎಂದ ಕೇಂದ್ರ ಸರಕಾರ

0
749

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಳೆದ ವರ್ಷ ಜನವರಿಯಲ್ಲಿ ದಿಲ್ಲಿ ಜೆಎನ್‍ಯು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳ ಮೇಲೆ ಮುಖವಾಡಧರಿಸಿ ದಾಳಿ ಮಾಡಿದ ಘಟನೆಯಲ್ಲಿ ಈವರೆಗೆ ಒಬ್ಬರನ್ನೂ ಬಂಧಿಸಿಲ್ಲ ಎಂದು ಕೇಂದ್ರ ಸರಕಾರ ಪಾರ್ಲಿಮೆಂಟಿಗೆ ತಿಳಿಸಿತು. ಘಟನೆಯಲ್ಲಿ ಮೂರು ಕೇಸು ದಾಖಲಾಗಿದೆ. ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಹ ಸಚಿವ ನಿತ್ಯಾನಂದ ರಾಯ್ ಹೇಳಿದರು.

ಸಾಕ್ಷಿಗಳ ಸಾಕ್ಷ್ಯ ಪಡೆದದ್ದು, ಸಿಸಿಟಿವಿ ದೃಶ್ಯಗಳ ಸಹಿತ ಸಾಕ್ಷ್ಯಗಳ ಸಂಗ್ರಹ ಆಗಿಯೂ ಒಂದುವರೆ ವರ್ಷದಿಂದ ಒಬ್ಬರನ್ನೂ ದಿಲ್ಲಿ ಪೊಲೀಸರು ಬಂಧಿಸಿಲ್ಲ. 2020 ಜನವರಿ ಐದರಂದು ಶುಲ್ಕ ಹೆಚ್ಚಳವನ್ನು ವಿರೋಧಿಸಿ ಹೋರಾಟಕ್ಕಿಳಿದ ವಿದ್ಯಾರ್ಥಿಗಳ ಮೇಲೆ ಎ.ಬಿ.ವಿ.ಪಿ ನೇತೃತ್ವದಲ್ಲಿ ಗೂಂಡಾಗಳು ದಾಳಿಮಾಡಿದ್ದರು.

ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಶಿ ಘೋಷ್ ಸಹಿತ ಹಲವರು ಗಂಭೀರ ಗಾಯಗೊಂಡಿದ್ದರು. ಆಯುಧದೊಂದಿಗೆ ಎಬಿವಿಪಿ ಕಾರ್ಯಕರ್ತರು ದಾಳಿ ನಡೆಸಿದಾಗ ಸುರಕ್ಷಾ ಉದ್ಯೋಗಿಗಳು ಬರೇ ನೋಡಿ ನಿಂತಿದ್ದರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಹಾಸ್ಟೆಲ್‍ನಲ್ಲಿ ಅಕ್ರಮವಾಗಿ ನುಗ್ಗಿದ ಎಬಿವಿಪಿ ಕಾರ್ಯಕರ್ತರು ದಾಂಧಲೆ ಮಾಡಿದ್ದರು. ವಾಹನಗಳ ಪುಡಿಗುಟ್ಟಿದ್ದರು. ದಾಳಿಯನ್ನು ತಡೆಯಲು ಬಂದ ಅಧ್ಯಾಪಕರೂ ಗಾಯಗೊಂಡಿದ್ದರು.