ತ್ರಿವಳಿ ತಲಾಕ್ ಮತ್ತು ರಾಮ ಮಂದಿರ: ಅಧ್ಯಾದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಲಾ ಬೋರ್ಡ್

0
1106

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವುದಕ್ಕಾಗಿ ಅಥವಾ ತ್ರಿವಳಿ ತಲಾಕನ್ನು ಕ್ರಿಮಿನಲ್ ಕೃತ್ಯವಾಗಿ ಪರಿವರ್ತಿಸುವುದಕ್ಕಾಗಿ ಕೇಂದ್ರ ಸರಕಾರವು ಅಧ್ಯಾದೇಶವನ್ನೋ ಮಸೂದೆಯನ್ನೋ ತಂದರೆ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ಎಚ್ಚರಿಸಿದೆ.

ಕೇಂದ್ರದ ತ್ರಿವಳಿ ತಲಾಕ್ ಮಸೂದೆಯ ವಿರುದ್ಧ ಎಲ್ಲ ಜಾತ್ಯತೀತ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿ ಮನವರಿಕೆ ಮಾಡುವುದಕ್ಕಾಗಿ ಒಂದು ಸಮಿತಿಯನ್ನು ರಚಿಸಿರುವುದಾಗಿ ಬೋರ್ಡ್ ಬಹಿರಂಗಪಡಿಸಿದೆ.

ಸುಪ್ರೀಂ ಕೋರ್ಟ್ ತ್ರಿವಳಿ ತಲಾಕನ್ನು ಅನೂರ್ಜಿತಗೊಳಿಸಿದೆಯೇ ಹೊರತು ಕ್ರಿಮಿನಲ್ ಕೃತ್ಯವಾಗಿಸಿಲ್ಲ. ಆದರೆ, ಅಧ್ಯಾದೇಶವು ಈ ಅನೂರ್ಜಿತವನ್ನೇ ಕ್ರಿಮಿನಲ್ ಅಪರಾಧವಾಗಿ ಬದಲಿಸಿದ್ದು, ಈ ನಡೆ ಮಹಿಳಾ ವಿರೋಧಿ ಎಂದು ಅದು ಹೇಳಿದೆ.

ಯಾವುದೇ ಅಧ್ಯಾದೇಶವು ನಿಗದಿತ ಸಮಯದೊಳಗೆ ಪಾರ್ಲಿಮೆಂಟ್ ನಲ್ಲಿ ಮಂಜೂರಾಗದಿದ್ದರೆ ತನ್ನಿಂತಾನೇ ರದ್ದಾಗುತ್ತದೆ. ಒಂದು ವೇಳೆ, ಕೇಂದ್ರವು ಈ ಬಾರಿಯ ಪಾರ್ಲಿಮೆಂಟ್ ಅಧಿವೇಶನದಲ್ಲಿ ಈ ಅಧ್ಯಾದೇಶವನ್ನು ಮಂಡಿಸಿ ಅನುಮತಿ ಪಡಕೊಂಡರೆ, ನಾವು ಕೋರ್ಟಿನ ಕದ ತಟ್ಟುವೆವು ಎಂದು ಬೋರ್ಡ್ ಸದಸ್ಯ ಕಾಸಿಂ ರಸೂಲ್ ಇಲ್ಯಾಸ್ ತಿಳಿಸಿದ್ದಾರೆ.