ಎಲ್ಲಿಯವರೆಗೆ ಸೃಷ್ಟಿಕರ್ತನ ಮಾತು ನಮಗೆ ಮುಖ್ಯವಾಗುವುದಿಲ್ಲವೋ ಅಲ್ಲಿಯವರೆಗೆ..

0
791

ಡಾ| ಫರ್‌ಹತ್‌ ಹಾಶ್ಮಿ

ಅಲ್ಲಾಹನ ಧರ್ಮದ ವಿದ್ಯೆ ಮತ್ತು ಲೌಕಿಕ ವಿದ್ಯೆಯ ವ್ಯತ್ಯಾಸ ಏನು? ಈ ವಿದ್ಯೆ ಏಕೆ ಅಗತ್ಯವಾಗಿದೆ? ಯಾವುದೇ ವಿದ್ಯೆ ಅದು ಅಗತ್ಯವಿಲ್ಲವೆಂದು ತಿಳಿದರೆ ನೀವದನ್ನು ಪೂರ್ತಿಗೊಳಿಸಲಾರಿರಿ.

ರ‌್ಯಾಂಗ್ ವಿಜೇತ ವಿದ್ಯಾರ್ಥಿಯು ತನಗೆ ವಿದ್ಯೆಯು ಅತೀ ಅಗತ್ಯವೆಂದು ಭಾವಿಸುತ್ತಾನೆ. ಅದರ ಹಿಂದೆ ಕಠಿಣ ಪರಿಶ್ರಮ ವಹಿಸುತ್ತಾನೆ ಮತ್ತು ಕೊನೆಗೆ ತಾನು ನಿರೀಕ್ಷಿಸಿದ ಗುರಿಯನ್ನು ತಲುಪುತ್ತಾನೆ. ಆದರೆ ತಾನು ಕಲಿಯುತ್ತಿರುವ ವಿದ್ಯೆಯು ತನಗೆ ಅಗತ್ಯವಿಲ್ಲವೆಂದು ಭಾವಿಸಿದ ವಿದ್ಯಾರ್ಥಿಯು ಆ ವಿದ್ಯೆಯನ್ನು ಪೂರ್ತಿಗೊಳಿಸಲಾರ ಮತ್ತು ಗುರಿ ಮುಟ್ಟಲಾರ. ಉನ್ನತ ವಿದ್ಯೆಯನ್ನು ಪಡೆಯಲಾರ.

ಅದೇ ರೀತಿ ಅಲ್ಲಾಹನ ದೀನಿನ ಅರಿವು ಗಳಿಸುವುದು ಅಗತ್ಯವಿಲ್ಲವೆಂದು ಭಾವಿಸಿದರೆ, ನೀವದರ ಪ್ರಯೋಜನವನ್ನು ಪಡೆಯಲಾರಿರಿ ಮತ್ತು ಪರಲೋಕವೆಂಬ ಶಾಶ್ವತ ಲೋಕದ ಗುರಿ ಮುಟ್ಟಲಾರಿರಿ. ಧಾರ್ಮಿಕ ವಿದ್ಯೆಯಲ್ಲಿ ಲೋಕ ಮತ್ತು ಪರಲೋಕ ಎರಡರ ಹಿತವೂ ಅಡಗಿದೆ. ಎಲ್ಲಿಯವರೆಗೆ ಸೃಷ್ಟಿಕರ್ತನ ಮಾತು ನಮಗೆ ತಿಳಿಯುವುದಿಲ್ಲವೋ ಅಲ್ಲಿಯ ವರೆಗೆ ಇತರರ ಸಂದೇಶಗಳು ಅರ್ಥಹೀನವಾಗಿವೆ. ಲೋಕದ ವಿದ್ಯೆಯು ನಮ್ಮ ದೈಹಿಕ ಅವಶ್ಯಕತೆಯನ್ನು ಪೂರೈಸಿ ಕೊಡುತ್ತದೆಯೇ ಹೊರತು, ಆತ್ಮದ ಅಗತ್ಯವನ್ನಲ್ಲ. ಎಲ್ಲಿಯವರೆಗೆ ಮನುಷ್ಯನಲ್ಲಿ ಆತ್ಮ ಇರುವುದಿಲ್ಲವೋ ಅಲ್ಲಿಯ ತನಕ ಮನುಷ್ಯ ಮನುಷ್ಯನಾಗಲಾರ ಮತ್ತು ಆತ್ಮದ ಅವಶ್ಯಕತೆಯು ಈ ವಿದ್ಯೆ(ಕುರ್‌ಆನ್‌)ಯ ಹೊರತು ಪೂರ್ತಿಯಾಗಲು ಸಾಧ್ಯವೇ ಇಲ್ಲ.

ಆದ್ದರಿಂದಲೇ ಇಂದು ಬಹಳಷ್ಟು ಜನರು ಎಲ್ಲವನ್ನು ಹೊಂದಿದ್ದೂ ಸಂತೃಪ್ತರಾಗಿರುವುದಿಲ್ಲ. ಅವರಿಗೆ ಮನಶ್ಶಾಂತಿ ಎಂಬುದಿಲ್ಲ. ನೆಮ್ಮದಿಯಿಲ್ಲ.ತಮ್ಮನ್ನು ತೃಪ್ತಿ ಪಡಿಸಿಕೊಳ್ಳುವ ಬೇರೆ ಯಾವುದಾದರೂ ದಾರಿಯನ್ನು ಅರಸುತ್ತಿರುತ್ತಾರೆ. ಕೆಲವರು ಸಂಗೀತದ ಹಿಂದೆ, ಮತ್ತೆ ಕೆಲವರು ಮದ್ಯಪಾನದ ಹಿಂದೆ, ಬೇರೆ ಕೆಲವರು ಅನ್ಯರ ಅನುಭವ, ಕುರುಡು ಅನುಕರಣೆಗಳ ಮೂಲಕ ತಮ್ಮನ್ನು ತಣಿಸ ಬಯಸುತ್ತಾರೆ. ಆದರೆ ಆತ್ಮವನ್ನು ತೃಪ್ತಿಗೊಳಿಸುವ ಯಾವೆಲ್ಲ ಮನುಷ್ಯ ನಿರ್ಮಿತ ವಿಧಾನಗಳಿವೆಯೋ ಅವೆಲ್ಲವೂ ಕೇವಲ ಕಾಲ್ಪನಿಕ. ಯಾರು ನಮ್ಮೊಳಗೆ ಆತ್ಮವನ್ನು ಹಾಕಿರುವನೋ, ಅವನಿಂದಲೇ ಪರಿಹಾರವನ್ನು ಕಂಡುಕೊಳ್ಳುವುದು ಬುದ್ಧಿವಂತಿಕೆಯಾಗಿದೆ.

“ಇಂತಹವರೇ (ಈ ಪ್ರವಾದಿಯ ಆಹ್ವಾನವನ್ನು) ಸ್ವೀಕರಿಸಿದ್ದಾರೆ ಮತ್ತು ಅವರ ಹೃದಯಗಳಿಗೆ ಅಲ್ಲಾಹನ ಸ್ಮರಣೆಯಿಂದ ಶಾಂತಿಯೊದಗುತ್ತದೆ. ಕೇಳಿರಿ, ಮನಶ್ಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ.”[ಪವಿತ್ರ ಕುರ್‌ಆನ್‌]

ನೀವು ಕುರ್‌ಆನಿನಿಂದ ನೂರ್‌(ಪ್ರಕಾಶ) ಪಡೆಯುತ್ತಿಲ್ಲವಾದರೆ ಬಹಳ ದೊಡ್ಡ ನಷ್ಟವಾಗುವುದು.ಆದ್ದರಿಂದ ಕುರ್‌ಆನಿನ ಮೌಲ್ಯ ಮತ್ತು ಮಹತ್ವವನ್ನು ಅರಿಯಿರಿ. ಇದು ಅತೀ ಅಗತ್ಯವಾಗಿದೆ. ಅನ್ನಪಾನೀಯದಂತೆ ಮತ್ತು ಎಲ್ಲ ಮೂಲಭೂತ ಅಗತ್ಯದಂತೆ, ಆತ್ಮವನ್ನು ತೃಪ್ತಿ ಪಡಿಸುವುದು ಅತೀ ಅಗತ್ಯವಾಗಿದೆ. ಎಲ್ಲಿಯ ತನಕ ಆತ್ಮ ತೃಪ್ತವಾಗುವುದಿಲ್ಲವೋ ಅಲ್ಲಿಯ ತನಕ ದೇಹದ ಯಾವ ಭಾಗವೂ ತನ್ನ ಸ್ಥಾನದಲ್ಲಿ ತಂಗಲಾರದು. ಆತ್ಮವು ಬದುಕಿನ ತಳಹದಿಯಾಗಿದೆ. ಅದರ ವಿನಾ ಬದುಕನ್ನು ಕಲ್ಪಿಸಲೂ ಸಾಧ್ಯವಿಲ್ಲ. ಬೇರೆಲ್ಲವೂ ಅದರೊಂದಿಗೆ ಜೋಡಿಕೊಂಡಿದೆ.

ಆತ್ಮವು ಗಟ್ಟಿಯಾಗಿದ್ದರೆ ಬೇರೆಲ್ಲ ವಿಷಯಕ್ಕೆ ಮೆರುಗು ಬರುವುದು. ನಮ್ಮ ಬುದ್ಧಿ ಕೂಡಾ ಸಕಾರಾತ್ಮಕ ರೀತಿಯಲ್ಲಿ ಕಾರ್ಯವೆಸಗುವುದು…