ಖದೀಜ ನುಸ್ರತ್, ಅಬುಧಾಬಿ
ದುಬೈ ಜೈಲಿನಲ್ಲಿ ಸಿಗುವ ಉತ್ತಮ ಉಪಚಾರ, ಸೌಲಭ್ಯ ಮತ್ತು ಸೇವೆಯಿಂದ 11 ಮಂದಿ ಮಹಿಳೆಯರು ಜೈಲು ಅವಧಿ ಪೂರ್ತಿಗೊಳಿಸಿದ ಬಳಿಕ ಸ್ವದೇಶಕ್ಕೆ ಮರಳಲು ನಿರಾಕರಿಸಿದ್ದಾರೆ ಎಂದು ಮಹಿಳಾ ಜೈಲಿನ ನಿರ್ದೇಶಕಿ ಅoಟ ಜಮಿಲಾ ಖಲೀಫಾ ಅಲ್ ಝಾಬಿ ತಿಳಿಸಿದ್ದಾರೆ.
ಜೈಲಿನಲ್ಲಿರುವ ಕೆಲವು ಕೈದಿಗಳ ಅನುಭವವು ಅತ್ಯದ್ಭುತವಾಗಿದೆ . ಏಕೆಂದರೆ ಅವರು ಜೈಲಿನಲ್ಲಿ ಸುರಕ್ಷಿತ ಜೀವನವನ್ನು ಅನುಭವಿಸುತ್ತಾರೆ. ತಮ್ಮ ತಾಯ್ನಾಡಿನಲ್ಲಿ ಕೂಡಾ ಇಂತಹ ಸುರಕ್ಷಿತ ಜೀವನವನ್ನು ಹೊಂದಿಲ್ಲ ಎಂದು ಹೇಳುತ್ತಾರೆ. ಜೈಲು ಅಧಿಕಾರಿಗಳ ಪ್ರಾಮಾಣಿಕ ಕಾರ್ಯ ನಿರ್ವಹಣಾ ಶೈಲಿ ಹಾಗೂ ರಚನಾತ್ಮಕ ಕಾರ್ಯಕ್ರಮಗಳಿಂದ ಜೈಲುವಾಸಿಗಳಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಹಾಗೂ ಪೋಷಕಾಂಶವಿರುವ ಆಹಾರವನ್ನು ನೀಡಲಾಗುತ್ತದೆ.
ಅವರಿಗೆ ತಮ್ಮ ಕುಟುಂಬದೊಂದಿಗೆ, ಅದರಲ್ಲೂ ವಿಶೇಷವಾಗಿ ಅವರ ಮಕ್ಕಳೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದಾಗಿ ಶಾರೀರಿಕವಾಗಿಯೂ ಮತ್ತು ಮಾನಸಿಕವಾಗಿಯೂ ಶಾಂತಿ ಮತ್ತು ಸಮಾಧಾನದಿಂದ ಕೂಡಿದ ಪರಿಸರದಲ್ಲಿ ವಾಸಿಸಲು ಸಾಧ್ಯವಾಗುತ್ತದೆ . ಜೈಲುಗಳು ಶಿಕ್ಷೆಗೆ ಬದಲಾಗಿ ಸಾಂತ್ವನವನ್ನು ನೀಡುವ ತಾಣಗಳಾಗಿ ಮಾರ್ಪಟ್ಟಿದೆ. ಬೇರೆ ಎಲ್ಲಿಯೋ ಸಿಗದ ಆರೈಕೆ ಅವರಿಗೆ ಜೈಲಿನಲ್ಲಿ ಸಿಗುತ್ತಿದೆ.
ಕುರ್ ಅನ್ ಪಾರಾಯಣ, ರಮಝನ್ ತಿಂಗಳಲ್ಲಿ ಉಪವಾಸ ಆಚರಿಸಲು ಮತ್ತು ಪ್ರಾರ್ಥನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈದ್, ರಮದಾನ್ ಮತ್ತು ರಾಷ್ಟ್ರೀಯ ದಿನದಂತಹ ವಿಶೇಷ ಸಂದರ್ಭಗಳಲ್ಲಿ ಕೈದಿಗಳ ಬಿಡುಗಡೆಗೆ ರಿಯಾಯಿತಿ ನೀಡಲಾಗುತ್ತದೆ.ದುಬೈ ಪೋಲಿಸರು ಕೈದಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.
ಈ ಜೈಲು ಕೇವಲ ಶಿಕ್ಷಿಸುವಂತಹ ಸಂಸ್ಥೆಯಾಗಿರದೆ ಇದರಲ್ಲಿ ಸುಸಜ್ಜಿತವಾದ ಗ್ರಂಥಾಲಯ, ಕ್ರೀಡೆ ಮತ್ತು ಮನರಂಜನಾ ಸಭಾಂಗಣ, ವಿವಿಧ ಪಂದ್ಯಗಳಿಗೆ ಬೇಕಾದಂತಹ ದೊಡ್ಡ ಮೈದಾನ ಮತ್ತು ವಿವಿಧ ಸೌಲಭ್ಯಗಳಿರುವ ಕಟ್ಟಡಗಳು ಮತ್ತು ಕೋಣೆಗಳನ್ನು ಹೊಂದಿದೆ. ಸುತ್ತಲೂ ನಡೆಯಲು ಮತ್ತು ವ್ಯಾಯಾಮವನ್ನು ಮಾಡಲು ವಿವಿಧ ಸೌಲಭ್ಯಗಳಿವೆ. ಜೈಲಿನಲ್ಲಿ ಅವರೊಂದಿಗೆ ದಯೆ ಮತ್ತು ಕರುಣೆಯಿಂದ ವರ್ತಿಸಲಾಗುತ್ತದೆ, ಚಿತ್ರಕಲೆ, ಹೊಸ ಕಲೆ ಕೌಶಲ್ಯಗಳನ್ನು ಕಲಿಯಲು ಪ್ರೋತ್ಸಾಹ ನೀಡಲಾಗುತ್ತದೆ.
ಇಲ್ಲಿ ಹಲವಾರು ರಾಷ್ಟ್ರಗಳ ಮಹಿಳಾ ಕೈದಿಗಳು ಇರುವುದರಿಂದ ಅವರ ಮಧ್ಯೆ ಯಾವುದೇ ತಾರತಮ್ಯ ಮಾಡಲಾಗುವುದಿಲ್ಲ . ಎಲ್ಲರನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.
ಜೈಲು ಆಡಳಿತ ವರ್ಗ ಮತ್ತು ಅಧಿಕಾರಿಗಳು ಕೈದಿಗಳು ಜೈಲು ಅವಧಿಯನ್ನು ಪೂರ್ತಿಗೊಳಿಸಿದ ಬಳಿಕ ಹೊಸ ಜೀವನ ನಡೆಸಲು ಬೇಕಾದ ಉತ್ತಮ ಅವಕಾಶಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದು ಅoಟ ಜಮಿಲಾ ಖಲೀಫಾ ಅಲ್ ಅಲ್ ಝಾಬಿ ತಿಳಿಸಿದ್ದಾರೆ ಎಂದು ವಿವಿಧ ಸ್ಥಳೀಯ ಪತ್ರ ಮಾಧ್ಯಮಗಳು ಮತ್ತು ವೆಬ್ ಸೈಟ್ ಗಳು ವರದಿ ಮಾಡಿದೆ.












