ಅವನು ಅಧಿಕಾರವನ್ನು ಯಾರಿಗೆ ಬಯಸುತ್ತಾನೋ ಅವರಿಗೆ ನೀಡುತ್ತಾನೆ..

0
979

ಮಾನವನ ಜೀವ, ಸೊತ್ತು ಮತ್ತು ಮಾನದ ರಕ್ಷಣೆ, ದೇಶದ ಶಾಂತಿ, ನೀತಿ-ಚಾರಿತ್ರ್ಯಕ್ಕೆ ಕೇಡು ತಟ್ಟದಂತೆ ರಕ್ಷಿಸುವುದು ಒಂದು ನಾಗರಿಕ ಸಮಾಜಕ್ಕೆ ಎಷ್ಟು ಅಗತ್ಯವೆಂದನ್ನು ವಿವರಿಸುವ ಅಗತ್ಯವಿಲ್ಲ. ಅದರ ಹೊರತು ಮಾನವನ ಸುಧಾರಣೆ ಮತ್ತು ಸಜ್ಜನರ ಸಾಮೂಹಿಕ ವ್ಯವಸ್ಥೆಯ ಉಳಿವು ಸಾಧ್ಯವಿಲ್ಲ. ಮಾನವತೆಯ ಏಳಿಗೆಯೂ ಸಾಧ್ಯವಿಲ್ಲ. ಇಸ್ಲಾಮ್ ನೀಡುವ ಈಮಾನಿನ ಶಿಕ್ಷಣಗಳು, ಮನ-ಮಸ್ತಿಷ್ಕಗಳಲ್ಲಿ ರೂಢಮೂಲಗೊಳಿಸುವ ಪರಲೋಕದ ಕಲ್ಪನೆ ಗಳು ಹಾಗೂ ಪರಲೋಕದ ಶಾಶ್ವತ ರಕ್ಷೆ-ಶಿಕ್ಷೆಗಳ ವಾಸ್ತವಿಕತೆಗಳು ಇದರ ಭದ್ರ ಬುನಾದಿಗಳಾಗಿವೆ.

ಆದ್ದರಿಂದ ಇವುಗಳನ್ನು ರಕ್ಷಿಸುವ ಸಲುವಾಗಿ ಶಿಕ್ಷಾ ನಿಯಮಗಳನ್ನು ನಿಶ್ಚಯಿಸಿದೆ. ಶಾಂತಿ-ಸಮಾಧಾನ ವನ್ನು ಸ್ಥಾಪಿಸಲು ಮತ್ತು ಅಪರಾಧಗಳನ್ನು ತಡೆಗಟ್ಟಲು ಕಾನೂನುಗಳನ್ನು ರಕ್ಷಿಸಿದೆ. ಅದನ್ನು ಜಾರಿಗೊಳಿಸುವುದರ ಮಹತ್ವವು ಆರಾಧನೆಗಳಿಗಿಂತ ಕಡಿಮೆಯೇನಲ್ಲ. ಆದರೆ ಈ ಅಪರಾಧಗಳಿಗೆ ಶಿಕ್ಷೆ ಜಾರಿಗೊಳಿಸುವುದು ಆಡಳಿತ ವ್ಯವಸ್ಥೆಯ ಕೆಲಸವಾಗಿದೆ. ಏಕೆಂದರೆ ಕಾನೂನನ್ನು ಕೈಗೆತ್ತಿಕೊಳ್ಳಲು ಎಲ್ಲರಿಗೂ ಅನುಮತಿಯಿಲ್ಲ. ಅದರ ಅನುಮತಿ ನೀಡಲಾದರೆ ದೇಶದಲ್ಲಿ ಅರಾಜಕತೆಯುಂಟಾಗಿ ವ್ಯವಸ್ಥೆಯು ಛಿದ್ರ ಛಿದ್ರವಾಗುವುದರಲ್ಲಿ ಸಂದೇಹವಿಲ್ಲ.

ಅಲ್ಲಾಹನ ಮೇಲೂ ಪರಲೋಕದ ಮೇಲೂ ವಿಶ್ವಾಸವಿರಿಸುವವರಿಗೆ ಈ ಆದೇಶಗಳ ಪಾಲನೆ ಕಡ್ಡಾಯವಾಗಿದೆ. ಮುಸ್ಲಿಮರ ಆಡಳಿತವಿರುವಲ್ಲಿ ಶರೀಅತ್‍ನಲ್ಲಿ ನಿಶ್ಚಯಿಸಲಾದ ಶಿಕ್ಷಾ ನಿಯಮಗಳು ಜಾರಿಗೊಳ್ಳುತ್ತದೋ ಇಲ್ಲವೋ ಎಂದು ನೋಡುವುದು ಮುಸಲ್ಮಾನರ ಕೆಲಸವಾಗಿದೆ. ಅದು ಜಾರಿಗೊಳ್ಳುವುದಿಲ್ಲವೆಂದಾದರೆ ಅದನ್ನು ಜಾರಿಗೊಳಿಸುವಂತೆ ಆಡಳಿತದ ಮೇಲೆ ಒತ್ತಡ ಹೇರಬೇಕು. ಆಡಳಿತವು ಅದಕ್ಕೆ ತಯಾರಿಲ್ಲವೆಂದಾದರೆ ಆ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಲು ಪ್ರಬಲ ಹೋರಾಟ ನಡೆಸಬೇಕು.

ಇನ್ನು ಈ ಆದೇಶವನ್ನು ಜಾರಿಗೊಳಿಸಬಲ್ಲ ರಾಜಕೀಯ ಅಧಿಕಾರವಿಲ್ಲವೆಂದಾದರೆ ಅಂತಹ ಒಂದು ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುವುದು ಕಡ್ಡಾಯವಾಗಿದೆ.
ಭೂಮಿಯ ಒಡೆಯ ಅಲ್ಲಾಹನಾಗಿದ್ದಾನೆ. ಅವನು ಅಧಿಕಾರವನ್ನು ಯಾರಿಗೆ ಬಯಸುತ್ತಾನೋ ಅವರಿಗೆ ನೀಡುತ್ತಾನೆ. ಪ್ರಜೆಗಳನ್ನು ಪ್ರೀತಿಸುವ, ಅವರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ, ಅವರ ಆವಶ್ಯ ಕತೆಗಳನ್ನು ಪೂರೈಸುವ ಪ್ರಜೆಗಳೊಂದಿಗೆ ನ್ಯಾಯಪಾಲಸುವ ಮತ್ತು ದೇಶದಲ್ಲಿ ಶಾಂತಿ-ಸಮಾಧಾನವನ್ನು ನೆಲೆಗೊಳಿಸುವ ಆಡಳಿತಗಾರರಿಗೆ ಅವನು ಹೆಚ್ಚು ಕಾಲಾವಕಾಶ ನೀಡುತ್ತಾನೆ.

ಇದಕ್ಕೆ ವ್ಯತಿರಿಕ್ತವಾಗಿ ಜನರ ಮೇಲೆ ದಬ್ಬಾಳಿಕೆ ನಡೆಸುವ, ಅವರನ್ನು ವಿವಿಧ ರೀತಿಯಲ್ಲಿ ಪೀಡಿಸುವ, ಅವರನ್ನು ಶೋಷಿಸುವ, ಅವರ ಮೇಲೆ ಅನ್ಯಾಯ ವೆಸಗುವ ಆಡಳಿ ತಗಾರರನ್ನು ಅವನು ಕಿತ್ತೆಸೆಯುತ್ತಾನೆ. ಮನುಷ್ಯನ ಇತಿಹಾಸದುದ್ದಕ್ಕೂ ಈ ಪ್ರಕ್ರಿಯೆಯು ನಡೆಯುತ್ತಾ ಬಂದಿವೆ. ಆದ್ದ ರಿಂದಲೇ ಪವಿತ್ರ ಕುರ್ ಆನಿನಲ್ಲಿ ಒಂದು ಪ್ರಾರ್ಥನೆಯನ್ನು ಕಲಿಸಿಕೊಡಲಾಗಿದೆ.

ಓ ಅಲ್ಲಾಹ್! ಸಕಲ ವಿಶ್ವಾಧಿಪತ್ಯದ ಒಡೆಯನೇ! ನಿನಗಿಷ್ಟ ಬಂದವರಿಗೆ ನೀನು ಆಡಳಿತಾಧಿಕಾರ ನೀಡುವೆ. ನಿನಗಿಷ್ಟ ಬಂದವರಿಂದ ಅಧಿಕಾರವನ್ನು ಕಸಿದುಕೊಳ್ಳುವೆ. ನಿನಗಿಷ್ಟ ಬಂದವರಿಗೆ ಪ್ರತಿಷ್ಠೆ ಪ್ರದಾನ ಮಾಡುವೆ. ನಿನಗಿಷ್ಟ ಬಂದವರನ್ನು ಅವಮಾನ ಪಡಿಸುವೆ. ಸಕಲ ಒಳಿತುಗಳೂ ನಿನ್ನ ಅಧಿಕಾರ ಹಸ್ತದಲ್ಲಿದೆ. (ಪವಿತ್ರ ಕುರ್ ಆನ್ 3:26)